ಮಂಜೇಶ್ವರ: ದೇಶಿಯ ಅಧ್ಯಾಪಕ ಪರಿಷತ್ (ಎನ್.ಟಿ.ಯು) ಇದರ ಮಂಜೇಶ್ವರ ಉಪ ಜಿಲ್ಲಾ ಸಮ್ಮೇಳನ ಮಂಜೇಶ್ವರ ಎಸ್.ಎ.ಟಿ ಶಾಲೆಯಲ್ಲಿ ಜರಗಿತು. ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ಅವರು ಧ್ವಜಾರೋಹಣ ಮಾಡುವುದರೊಂದಿಗೆ ಸಮ್ಮೇಳನಕ್ಕೆ ಚಾಲನೆಯನ್ನು ನೀಡಿದರು.
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ವಹಿಸಿದ್ದರು. ಎಸ್.ಎ.ಟಿ ವಿದ್ಯಾಸಂಸ್ಥೆಗಳ ಪ್ರಬಂಧಕ ಶ್ರೀಕೃಷ್ಣ ಭಟ್ ಅವರು ದೀಪ ಪ್ರಜ್ವಲನ ಮೂಲಕ ಸಮ್ಮೇಳನದ ಔಪಚಾರಿಕವಾಗಿ ಉದ್ಘಾಟಿಸಿದರು. ಪ್ರಾಂತ ಕಾರ್ಯದರ್ಶಿ ಪ್ರಭಾಕರ ನಾಯರ್, ಜಿಲ್ಲಾಧ್ಯಕ್ಷ ರಂಜಿತ್, ಸಹಕಾರ ಭಾರತೀಯ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ, ಎಸ್.ಎ.ಟಿ ಎಸ್ ಮುಖ್ಯೋಪಾಧ್ಯಾಯ ಮುರಳಿಕೃಷ್ಣ ಶುಭ ಹಾರೈಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ವಿಮಾನ ದುರಂತದಲ್ಲಿ ಹುತಾತ್ಮರಾದ ಶಸ್ತ್ರ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಗೌರವಾರ್ಥ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ದೇವಿಪ್ರಸಾದ್ ಉಚ್ಚಿಲ ಸ್ವಾಗತಿಸಿ ನಾರಾಯಣ್ ರಾಜ್ ವಂದಿಸಿದರು. ರಘುವೀರ ಯಂ ಪ್ರಾರ್ಥನೆ ಹಾಡಿದರು. ಈಶ್ವರ್ ಕಿದೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಜರಗಿದ ಸಂಘಟನಾ ಚರ್ಚೆಯ ಅಧ್ಯಕ್ಷತೆಯನ್ನು ಎನ್.ಟಿ.ಯು ಜಿಲ್ಲಾ ಉಪಾಧ್ಯಕ್ಷ ಡಿ.ಎಸ್ ಅರವಿಂದಾಕ್ಷ ಭಂಡಾರಿ ವಹಿಸಿದ್ದರು. ಎನ್.ಟಿ.ಯು ಪ್ರಾಂತ ಉಪಾಧÀ್ಯಕ್ಷ ವೆಂಕಪ್ಪ ಶೆಟ್ಟಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್, ಜಿಲ್ಲಾ ಸಮಿತಿ ಕೋಶಾಧಿಕಾರಿ ಮಹಾಬಲ ಭಟ್ ಸಂದರ್ಭೋಚಿತ ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಸಾಲಿನ ನೂತನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಉಪಜಿಲ್ಲಾ ಕಾರ್ಯದರ್ಶಿ ರಘುವೀರ್ ರಾವ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಈಶ್ವರ್ ಕಿದೂರು ಲೆಕ್ಕ ಪತ್ರವನ್ನು ಮಂಡಿಸಿದರು.