ಚಂಡೀಗಢ: ರೈತರ ಪ್ರತಿಭಟನೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿದ ಘಟನೆ ಬುಧವಾರ ನಡೆದಿದೆ. ಬಳಿಕ ಪ್ರಧಾನಿ ಮೋದಿ ಅವರು ಫಿರೋಜ್‌ಪುರದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ದೆಹಲಿಗೆ ವಾಪಸಾಗಿದ್ದಾರೆ. ಕೇಂದ್ರ ಸರ್ಕಾರ ಇದೊಂದು ಪ್ರಮುಖ ಭದ್ರತಾ ಲೋಪ ಎಂದು ಹೇಳಿದೆ.
ಪ್ರಧಾನಿ ಮೋದಿ ಅವರು ಬಟಿಂಡಾದಿಂದ ಫಿರೋಜ್‌ಪುರಕ್ಕೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಪ್ರಧಾನಿ ಮೋದಿ ಅವರು ದಿಢೀರ್ ರಸ್ತೆ ಮೂಲಕ ಪ್ರಯಾಣಿಸಿದ್ದಾರೆ. ಪ್ರಧಾನಿ ತೆರಳುತ್ತಿದ್ದ ರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರಿಂದ ಫಿರೋಜ್‌ಪುರ ಬಳಿಯ ಹುಸೇನಿವಾಲಾದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಫ್ಲೈಓವರ್‌ನಲ್ಲಿ ಪ್ರಧಾನಿ ಮೋದಿ 15 ರಿಂದ 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು.
ಕೇಂದ್ರ ಗೃಹ ಸಚಿವಾಲಯವು ಈ ಘಟನೆ "ದೊಡ್ಡ ಭದ್ರತಾ ಲೋಪ" ಎಂದಿದ್ದು, ಈ ಬಗ್ಗೆ ವರದಿ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಭದ್ರತಾ ಲೋಪದ ಕಾರಣದಿಂದ ಪ್ರಧಾನಿ ಮೋದಿ ಬಟಿಂಡಾದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸದೆ ವಿಮಾನ ನಿಲ್ದಾಣಕ್ಕೆ ವಾಪಸ್ ಆದರು ಎಂದು ಗೃಹ ಸಚಿವಾಲಯ ಹೇಳಿದೆ.
ಪ್ರಧಾನಿ ಮೋದಿ ಅವರು ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಬಟಿಂಡಾದ ಭೈಸಿಯಾನ ಏರ್ ಫೋರ್ಸ್ ಬಂದಿಳಿದಿದ್ದು, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ತೆರಳಬೇಕಾಗಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಮೋದಿ ವಿಮಾನ ನಿಲ್ದಾಣದಲ್ಲಿ ಸುಮಾರು 20 ನಿಮಿಷಗಳ ಕಾಲ ಕಾದರು. ಆದರೂ ಹವಾಮಾನ ಸುಧಾರಿಸದ ಕಾರಣ ರಸ್ತೆ ಮಾರ್ಗದ ಮೂಲಕ ಸ್ಮಾರಕಕ್ಕೆ ತೆರಳಲು ನಿರ್ಧರಿಸಿದರು.
ಪ್ರಧಾನಿ ಮೋದಿ ಪಂಜಾಬ್ ಪ್ರವಾಸಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಸಂಬಂಧ ಪಂಜಾಬ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, " ಘೋರ ಸೋಲಿನ ಭಯದಿಂದ ಪಂಜಾಬ್‌ನ ಕಾಂಗ್ರೆಸ್ ಸರ್ಕಾರ ಪ್ರಧಾನಿಯನ್ನು ಕೆಣಕಲು ಸಾಧ್ಯವಿರುವ ಎಲ್ಲ ತಂತ್ರಗಳನ್ನು ಅನುಸರಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.