ನವದೆಹಲಿ: ಅನೇಕ ಭಾರತೀಯರು ಮಹಿಳೆಯರನ್ನು ಕೂಡ ಮನುಷ್ಯರು ಎಂದು ಪರಿಗಣಿಸುವುದಿಲ್ಲ. ಈ ನಾಚಿಕೆಗೇಡಿನ ಕಹಿ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ 20 ವರ್ಷದ ಮಹಿಳೆಯನ್ನು ಅಮಾನುಷವಾಗಿ ಥಳಿಸಿ ಮೆರವಣಿಗೆ ಮಾಡಿರುವ ವೀಡಿಯೊ ಸಮಾಜದಲ್ಲಿನ ಬಹಳ ನಿಕೃಷ್ಟ ಪ್ರವೃತ್ತಿಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರು.
ಕಳೆದ ವಾರ, ಪೂರ್ವ ದೆಹಲಿಯ ಕಸ್ತೂರ ಬಾ ನಗರದಲ್ಲಿ ಕೆಲವು ದುಷ್ಟರು ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಮೆರವಣಿಗೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧದ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿವೆ.
'20 ವರ್ಷದ ಮಹಿಳೆಯನ್ನು ಕ್ರೂರವಾಗಿ ಥಳಿಸಿರುವ ವಿಡಿಯೋ ನಮ್ಮ ಸಮಾಜದ ಅತ್ಯಂತ ನಿಕೃಷ್ಟ ಮುಖವನ್ನು ತೆರೆದಿಡುತ್ತದೆ. ಕಹಿ ಸತ್ಯವೆಂದರೆ ಅನೇಕ ಭಾರತೀಯರು ಮಹಿಳೆಯರನ್ನು ಮನುಷ್ಯರೆಂದು ಪರಿಗಣಿಸುವುದಿಲ್ಲ. ಈ ನಾಚಿಕೆಗೇಡಿನ ಸಂಗತಿಯನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಗಾಂಧಿ ಟ್ವಿಟರ್ ನಲ್ಲಿ ಹೇಳಿದ್ದಾರೆ.
ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿ ಸಾರ್ವಜನಿಕ ಅವಮಾನ ಮಾಡಿದ ಎಂಟು ಮಹಿಳೆಯರು ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸದಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ. ಕೆಲವರು ಈ ಘಟನೆಗೆ ಕೋಮುವಾದದ ಬಣ್ಣ ಬಳಿಯುತ್ತಿದ್ದಾರೆ ಮತ್ತು ಕೆಲವರು ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವದಂತಿಗಳನ್ನು ಹರಡುತ್ತಿದ್ದಾರೆ. ಇದು ತಪ್ಪು ಮತ್ತು ಸುಳ್ಳು ಮಾಹಿತಿ. ಸಂತ್ರಸ್ತೆ ಸುರಕ್ಷಿತವಾಗಿದ್ದಾರೆ” ಎಂದು ಶಹದಾರದ ಉಪ ಪೊಲೀಸ್ ಆಯುಕ್ತ ಆರ್ ಸತ್ಯಸುಂದರಂ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆಯೇ ಕಾರಣ ಎಂದು ಆರೋಪಿಸಿ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕುಟುಂಬದವರು ಆಕೆಗೆ ಪಾಠ ಕಲಿಸಬೇಕೆಂದು ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ