ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿ ಐದು ರಾಜ್ಯಗಳ ಚುನಾವಣೆ ಮುಂದಿಟ್ಟುಕೊಂಡು ಕೇಂದ್ರ ಬಜೆಟ್‌ನಲ್ಲಿ ಸಂಬಳದಾರರಿಗೆ ಏನೆಲ್ಲ ಕೊಡುಗೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕೇಂದ್ರ ಬಜೆಟ್ ಈ ಬಾರಿ ಉದ್ಯೋಗ ಸೃಷ್ಟಿ, ಮೂಲ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ, ಪ್ರಮಾಣಿತ ಕಡಿತ ಮಿತಿ ಹೆಚ್ಚಳ, ವೈದ್ಯಕೀಯ ವೆಚ್ಚಗಳು, ತೆರಿಗೆ ದರಗಳ ತರ್ಕಬದ್ಧಗೊಳಿಸುವಿಕೆ ಮತ್ತು ಕೆಲವು ಸಾಮಾಜಿಕ ಭದ್ರತಾ ಹೂಡಿಕೆಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.
ಪ್ರಸ್ತುತ, ಐಟಿ ಕಾಯಿದೆಯ ಸೆಕ್ಷನ್ 16(1ಎ) ಸಂಬಳ ಪಡೆಯುವ ತೆರಿಗೆದಾರರಿಗೆ ರೂ 50,000 ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್) ಅನ್ನು ಅನುಮತಿಸಲಾಗಿದೆ. ಈ ಮಿತಿಯನ್ನು ಹೆಚ್ಚಿಸಲು ಅನೇಕ ಕೈಗಾರಿಕಾ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಹೀಗಾಗಿ ಅದನ್ನು 60,000 ರೂಪಾಯಿಗೆ ಹೆಚ್ಚಿಸುವ ಸಾಧ್ಯತೆ ಇದೆ.
ಹೆಚ್ಚುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚವನ್ನು ಪರಿಗಣಿಸಿ, ಮೂಲ ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಹೆಚ್ಚಳವಾಗದಿದ್ದಲ್ಲಿ ಸಂಬಳ ಪಡೆಯುವ ಸಿಬ್ಬಂದಿಗೆ ಪ್ರಮಾಣಿತ ಕಡಿತ ಮಿತಿಯನ್ನು 50,000 ರೂ.ಗಳಿಂದ 60,000 ರೂ.ಗೆ ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಆರ್ ಎಸ್ ಎಂ ಇಂಡಿಯಾ ಸಂಸ್ಥಾಪಕ ಸುರೇಶ್ ಸುರಾನಾ ಅವರು ಹೇಳಿದ್ದಾರೆ.
2018 ರಲ್ಲಿ ಅಂದಿನ ವಿತ್ತ ಸಚಿವ ದಿವಂಗತ ಅರುಣ್ ಜೇಟ್ಲಿ ಅವರು 40,000 ರೂಗಳ ಪ್ರಮಾಣಿತ ಕಡಿತವನ್ನು ಪರಿಚಯಿಸಿದರು ಮತ್ತು ನಂತರ 2019 ರಲ್ಲಿ ಮಧ್ಯಂತರ ಬಜೆಟ್‌ನಲ್ಲಿ ಪಿಯೂಷ್ ಗೋಯಲ್ ಅವರು 50,000 ರೂ.ಗೆ ಹೆಚ್ಚಿಸಿದರು.