ಬದಿಯಡ್ಕ: ಅಪೂರ್ವ ಸಮಾಜಸೇವಕ, ನೂರಾರು ಮನೆಗಳ ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ (85) ಅವರು ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ವಿಧಿವಶರಾದರು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ 265 ರಷ್ಟು ಮನೆಗಳನ್ನು ನಿರ್ಮಿಸಿ ನೀಡಿದ ಅವರು, ನೂರಾರು ಕುಟುಂಬಗಳಿಗೆ ಸೂರು ಒದಗಿಸಿಕೊಟ್ಟ ಮಹಾಪುರುಷರಾಗಿದ್ದರು. ಅಲ್ಲದೆ ಅಟೋ ರಿಕ್ಞಾ, ಹೊಲಿಗೆ ಯಂತ್ರ ಮೊದಲಾದ ಸ್ವ ಉದ್ಯೋಗ ಅವಕಾಶಗಳಿಗೆ ಯತೇಚ್ಚ ಕೊಡುಗೆಗಳ ಮೂಲಕ ಅದೆಷ್ಟೋ ಕುಟುಂಬಗಳಿಗೆ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಿದ್ದರು. ಶ್ರೀ ಸತ್ಯ ಸಾಯಿಬಾಬಾ ಅವರ ಅಪ್ರತಿಮ ಭಕ್ತರಾಗಿ ಸಾಯಿರಾಂ ಭಟ್ ಎಂದೇ ಖ್ಯಾತರಾಗಿದ್ದರು. ಅಲ್ಲದೆ ಕಿಳಿಂಗಾರಿನಲ್ಲಿ ಶ್ರೀ ಸಾಯಿ ಮಂದಿರವನ್ನು ಸ್ಥಾಪಿಸಿದ್ದರು. ಉಚಿತ ಆರೋಗ್ಯ ಶಿಬಿರಗಳನ್ನೂ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಶಾರದಾ ಭಟ್, ಪುತ್ರ , ಬದಿಯಡ್ಕ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಕೆ.ಎನ್.ಕೃಷ್ಣ ಭಟ್, ಪುತ್ರಿಯರಾದ ಶ್ಯಾಮಲಾ, ವಸಂತಿ ಅವರನ್ನು ಅಗಲಿದ್ದಾರೆ.
ಮಹಾ ಚೇತನದ ಪಥ:
ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ ಯಾನೆ ಸಾಯಿರಾಂ ಭಟ್ ಅವರು ತಮ್ಮ ಇಳಿವಯಸ್ಸಿನಲ್ಲೂ ಸಮಾಜ ಸೇವೆಯನ್ನು ಉಸಿರಾಗಿರಿಸಿಕೊಂಡ ಮಹಾನ್ ಚೇತನ. ಸೂರಿಲ್ಲದವರಿಗೆ ಮನೆ, ಅನಾರೋಗ್ಯಪೀಡಿತರಿಗೆ ಉಚಿತ ಔಷಧ, ನೀರಿನ ದಾಹ ತೀರಿಸಲು ಕುಡಿಯುವ ನೀರಿನ ಪೂರೈಕೆ, ಸ್ವ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಸಹಿತ ನಾನಾ ತರದಲ್ಲಿ ಬಡಜನತೆಯ ಸೇವೆಯನ್ನು ಕೈಗೊಂಡಿದ್ದರು. ಸಾಯಿರಾಂ ಭÀಟ್ ಅವರಿಗೆ ಸಾಯಿಬಾಬಾ ಅವರೇ ಪ್ರೇರಣಾ ಶಕ್ತಿ. ಜÁತಿ, ಮತ ಬೇಧವಿಲ್ಲದೆ ನಡೆದು ಬರುತ್ತಿರುವ ಇವರ ಸಮಾಜಸೇವೆ ನಾಡಿಗೆ ಆದರ್ಶವಾಗಿದೆ.
ಇದುವರೆಗೆ 265 ಕ್ಕೂ ಮಿಕ್ಕಿದ ಮನೆಗಳನ್ನು ನಿರ್ಮಿಸಿ, ಬಡಜನತೆಗೆ ಉಚಿತವಾಗಿ ಹಂಚಿದ್ದಾರೆ. ನೂರಾರು ಮಂದಿ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದ್ದಾರೆ. ಆರೋಗ್ಯ ಅರಸಿ ಬರುವವರಿಗೆ ಪ್ರತ್ಯೇಕ ವೈದ್ಯಕೀಯ ಶಿಬಿರ ನಡೆಸುವ ಮೂಲಕ ಉಚಿತ ಔಷಧ ವಿತರಿಸುತ್ತಿದ್ದರು. ಪ್ರತಿ ಶನಿವಾರ ಕಿಳಿಂಗಾರಿನ ಸಾಯಿ ಮಂದಿರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಸಲಾಗುತ್ತಿದೆ. ಕಿಳಿಂಗಾರು ಆಸುಪಾಸಿನ ಹಲವು ಮನೆಗಳಿಗೆ ಸ್ವಂತ ವೆಚ್ಚದಲ್ಲಿ ಕೊಳವೆಬಾವಿ ನಿರ್ಮಿಸಿ, ಕುಡಿಯುವ ನೀರು ಪೂರೈಸುತ್ತಿದ್ದಾರೆ. ಬದಿಯಡ್ಕ ಗ್ರಾಪಂಗೆ ಸೀಮಿತವಾಗಿದ್ದ ತಮ್ಮ ಮನೆ ನಿರ್ಮಾಣದ ಯೋಜನೆಯನ್ನು ಆಸುಪಾಸಿನ ಕೆಲವೊಂದು ಪಂಚಾಯಿತಿಗಳಿಗೆ ವಿಸ್ತರಿಸಿಕೊಂಡಿದ್ದಾರೆ.50ಸಾವಿರದಿಂದ ಒಂದು ಲಕ್ಷ ಖರ್ಚಿನಲ್ಲಿ ಪೂರ್ತಿಯಾಗುತ್ತಿದ್ದ ಮನೆಗೆ ಇಂದು ಎರಡುವರೆ ಲಕ್ಷ ರೂ. ವ್ಯಯಿಸುತ್ತಿದ್ದಾರೆ.
ಸರ್ಕಾರದ ಸವಲತ್ತಿಗಾಗಿ ಕಾಯದೆ, ಅನುದಾನ ಬಯಸದೆ, ಸದ್ದಿಲ್ಲದೆ ನಡೆಯುತ್ತಿರುವ ಇವರ ಸಮಾಜಸೇವೆ ಇನ್ನು ನೆನಪು ಮಾತ್ರ. ಯಾವುದೇ ಪ್ರಚಾರ ಬಯಸದ ಸರಳ ಸಜ್ಜನಿಕೆಯ ಸಾಯಿರಾಂ ಭಟ್ ಅವರದ್ದು ನೇರ ನಡೆ ನುಡಿ. ತನ್ನ ಕೃಷಿ ಹಾಗೂ ವೈಯಕ್ತಿಕ ಸಂಪಾದನೆಯಿಂದ ಬಂದ ಆದಾಯವನ್ನು ಮಾತ್ರ ಇವರು ಸಮಾಜಸೇವೆಗೆ ಬಳಸಿಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸರ್ಕಾರದ ಕೆಲವೊಂದು ಯೋಜನೆಗಳ ಸಹಕಾರದೊಂದಿಗೆ ಉಚಿತ ಮನೆ ನಿರ್ಮಾಣ ಕಾರ್ಯವನ್ನು ಮುನ್ನಡೆಸುತ್ತಿದ್ದರು. ಆಯುರ್ವೇದ ಚಿಕಿತ್ಸೆಗಳಲ್ಲಿ ನಿಪುಣರು. ಹಲವು ಮಂದಿ ಚಿಕಿತ್ಸೆಗಾಗಿ ಇವರಲ್ಲಿಗೆ ಬರುತ್ತಿದ್ದು, ಇವರ ಉತ್ತಮ ಕೈಗುಣದಿಂದ ಹಲವಾರು ಮಂದಿಗೆ ಕಾಯಿಲೆ ಗುಣಮುಖವಾಗಿದೆ. ಔಷದೋಪಚಾರಕ್ಕಾಗಿ ದಾನಿಗಳು ನೀಡುವ ಹಣವನ್ನು ಇವರು ಸಮಾಜಸೇವೆಗೆ ಬಳಸಿಕೊಳ್ಳುತ್ತಿದ್ದರು.
ಹೆಸರು, ಪ್ರಶಸ್ತಿ, ಪಾರಿತೋಷಕಕ್ಕಾಗಿ ಹಂಬಲಿಸಿದವರಲ್ಲ. ಹಲವಾರು ಪ್ರಶಸ್ತಿ, ಗೌರವಗಳು ಇವರನ್ನು ಅರಸಿಕೊಂಡುಬಂದಿದೆ. ಯಾವುದೇ ಪ್ರಶಸ್ತಿ ಲಭಿಸಲಿ, ಬಿಡಲಿ ತನ್ನ ಸಮಾಜಸೇವೆ ಕೊನೆಗೊಳ್ಳದು ಎಂದೇ ಕೊನೆವರೆಗೂ ನಂಬಿ ನಡೆದವರು. ಸಾಯಿರಾಂ ಭಟ್ ಅವರ ಸಮಾಜಸೇವೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದೆ. ಇವರ ಸಮಾಜ ಸೇವೆಯನ್ನೊಳಗೊಂಡ ಸಾಕ್ಷ್ಯಚಿತ್ರವೊಂದು ಮಲೆಯಾಳದಲ್ಲಿ ನಿರ್ಮಾಣವಾಗಿದೆ.
ಕಾಶಿ ಯಾತ್ರೆ ಕೈಬಿಟ್ಟು ಸಮಾಜಸೇವೆಗೆ...:
ದಶಕಗಳ ಹಿಂದಿನ ಕಥೆಯಿದು..........ಹೌದು........ಅದೊಂದು ದಿನ ಕಾಶಿ ಯಾತ್ರೆ ಕೈಗೊಳ್ಳುವ ತಯಾರಿಯಲ್ಲಿದ್ದ ಗೋಪಾಲಕೃಷ್ಣ ಭಟ್ ಅವರನ್ನು ಸಮಾಜಸೇವೆಗೆ ಪ್ರೇರೇಪಿಸಿದ ಘಟನೆ ಬಳಿಕ ಬಡಜನತೆಗೆ ಸೂರು ಕಲ್ಪಿಸುವ ಯೋಜನೆ ಸಾಕ್ಷಾತ್ಕಾರಗೊಳ್ಳಲು ಕಾರಣವಾಯಿತು. 1995ರಲ್ಲಿ ನಡೆದ ಘಟನೆಯೊಂದು 265 ಕ್ಕೂ ಮಿಕ್ಕಿದ ಬಡ ಕುಟುಂಬಗಳಿಗೆ ಸೂರು ಲಭ್ಯವಾಗುವಂತೆ ಮಾಡಿದೆ. ಮನೆ ಸನಿಹದ ನಿವಾಸಿ ಕುಂಟ್ಯಾನ ಎಂಬವರು ಬಿರುಸಿನ ಮಳೆಗೆ ತನ್ನ ಮನೆ ಧರಾಶಾಯಿಯಾಗಿದ್ದು, ಮನೆ ನಿರ್ಮಾಣಕ್ಕೆ ಒಂದಷ್ಟು ಸಾಮಗ್ರಿ ಒದಗಿಸುವಂತೆ ಕೇಳಿಕೊಳ್ಳಲು ಸಾಯಿರಾಂ ಭಟ್ ಮನೆಗೆ ಆಗಮಿಸಿದ್ದರು. ಪ್ರತಿ ವರ್ಷ ಕುಂಟ್ಯಾನ ಮನೆ ದುರಸ್ತಿಗೆ ಸಾಮಗ್ರಿ ಒದಗಿಸುತ್ತಿದ್ದ ಸಾಯಿರಾಂ ಭಟ್ ಅವರು ಈ ಬಾರಿ ಮನಸ್ಸು ಬದಲಾಯಿಸಿದರು. ತನ್ನ ಕಾಶಿ ಯಾತ್ರೆ ಕೈಬಿಟ್ಟು, ಕುಂಟ್ಯಾನ ಅವರಿಗೆ ಹೊಸ ಮನೆ ನಿರ್ಮಿಸಿಕೊಡುವ ಪಣ ತೊಟ್ಟರು! ಅಂದು ಆರಂಭಗೊಂಡ ಅಳಿಲು ಸೇವೆ ಬಳಿಕ ಚರಿತ್ರೆಯನ್ನೇ ನಿರ್ಮಿಸಿ ಕೇರಳದಾದ್ಯಂತ ಸಾಯಿರಾಂ ಭಟ್ ಅವರ ಹೆಸರನ್ನು ಎತ್ತರಕ್ಕೇರಿಸಿತು.
ಸಾಯಿರಾಂ ಭಟ್ ಅವರ ಅಗಲುವಿಕೆ ಕಾಸರಗೋಡಿಗೆ ಮಾತ್ರವಲ್ಲ ಸಕಾರಾತ್ಮಕ ಮನಸ್ಸಿನ ಪ್ರತಿಯೊಬ್ಬ ನಾಗರಿಕನಿಗೂ ತುಂಬಲಾರದ ನಷ್ಟ. ಅವರಿಲ್ಲದ ಆತ್ಮೀಯ ಬಳಗ ಅಕ್ಷರಶಃ ತಬ್ಬಲಿ.