ನವದೆಹಲಿ: ದೇಶದಲ್ಲಿ ಯಾರಿಗೂ ಒತ್ತಾಯಪೂರ್ವಕವಾಗಿ ಕೋವಿಡ್-19 ಲಸಿಕೆ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ ಮಾಡಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಒತ್ತಾಯದಿಂದ ಯಾರಿಗೂ ಲಸಿಕೆ ನೀಡುವುದಿಲ್ಲ. ಅಂತಹ ಯಾವುದೇ ಸೂಚನೆಯನ್ನು ಕೇಂದ್ರ ಸರ್ಕಾರ ಅಥವಾ ಆರೋಗ್ಯ ಸಚಿವಾಲಯ ಹೊರಡಿಸಿಲ್ಲ ಎಂದು ಹೇಳಿದೆ.
ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲಾಗುತ್ತಿದೆ ಮತ್ತು ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ ಎಂದು ಈವರ ಫೌಂಡೇಶನ್ ಎಂಬ ಎನ್‌ಜಿಒ ಒಂದು ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರ ಈ ಉತ್ತರ ನೀಡಿದೆ.
ಲಸಿಕೆ ನೀಡುವುದು ಮತ್ತು ಲಸಿಕೆ ಪಡೆದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸುವ ಕ್ರಮವನ್ನು ಎಲ್ಲಿಯೂ ಜಾರಿಗೆ ತಂದಿಲ್ಲ. ಜನರ ಹಿತಾಸಕ್ತಿಯಿಂದ ಮತ್ತು ಕೊರೊನಾ ಸೋಂಕು ಎಲ್ಲೆಡೆ ಹರಡುವುದನ್ನು ತಪ್ಪಿಸಲು ಲಸಿಕೆ ಪಡೆಯುವುದು ಮತ್ತು ಲಸಿಕೆ ಪ್ರಮಾಣಪತ್ರ ಹೊಂದಿರುವುದನ್ನು ಆರೋಗ್ಯ ಸಚಿವಾಲಯ ಅಭಿಯಾನ ಕೈಗೊಂಡಿದೆ. ಆದರೆ ಒತ್ತಾಯದಿಂದ ಯಾರ ಮೇಲೂ ಅದನ್ನೂ ಹೇರಿಲ್ಲ. ಎಲ್ಲರೂ ಲಸಿಕೆ ಪಡೆದು ಕೋವಿಡ್ ಸೋಂಕಿನ ವಿರುದ್ಧ ಹೋರಾಡುವಂತೆ ಸೂಚಿಸಲಾಗಿದೆ. ಆದರೆ ಯಾರಿಗೂ ಅವರ ಇಚ್ಛೆಗೆ ವಿರುದ್ಧವಾಗಿ ಲಸಿಕೆ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.