ಓಮಿಕ್ರಾನ್ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದೆ, ತೀವ್ರತೆ ಕಡಿಮೆ ಎಂಬುದನ್ನು ದಾರಿತಪ್ಪಿಸುವ ಹೇಳಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಎಚ್ಚರಿಸಿದ್ದು, ಓಮಿಕ್ರಾನ್ ನಿಂದ ಆಸ್ಪತ್ರೆಗೆ ದಾಖಲಾಗುವುದು ಹಾಗೂ ಸಾವು ಜಾಗತಿಕ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ ಎಂದು ಡಬ್ಲ್ಯುಹೆಚ್ಒ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಘೆಬ್ರಿಯೆಸಸ್ ಹೇಳಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿವಿಯ ಮಾಹಿತಿಯ ಪ್ರಕಾರ ಜಾಗತಿಕ ಮಟ್ಟದಲ್ಲಿ ಕೊರೋನಾ ಕೇಸ್ ಲೋಡ್ 333.5 ಮಿಲಿಯನ್ ನ್ನು ದಾಟಿದ್ದು, 5.55 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 9.68 ಬಿಲಿಯನ್ ಮಂದಿಗಿಂತಲೂ ಹೆಚ್ಚಿನ ಜನ ಲಸಿಕೆಗಳನ್ನು ಪಡೆದಿದ್ದಾರೆ.
"ನಿರ್ಲಕ್ಷ್ಯ ವಹಿಸಿ ತಪ್ಪು ಮಾಡಬೇಡಿ, ಓಮಿಕ್ರಾನ್ ನಿಂದ ಆಸ್ಪತ್ರೆಗೆ ಸೇರುವ ಸ್ಥಿತಿಯೂ ಬರುತ್ತದೆ ಅಷ್ಟೇ ಅಲ್ಲದೇ ಸಾವೂ ಸಂಭವಿಸಬಹುದು, ಕಡಿಮೆ ತೀವ್ರತೆಯ ಪ್ರಕರಣಗಳೂ ಆರೋಗ್ಯ ಸೌಲಭ್ಯಗಳನ್ನು ಬುಡಮೇಲು ಮಾಡುತ್ತಿದೆ" ಎಂದು ಡಬ್ಲ್ಯುಹೆಚ್ಒ ಮುಖ್ಯಸ್ಥರು ಎಚ್ಚರಿಸಿದ್ದಾರೆ.
"ಸರಾಸರಿಯಲ್ಲಿ ಓಮಿಕ್ರಾನ್ ಕಡಿಮೆ ತೀವ್ರತೆಯನ್ನು ಹೊಂದಿರಬಹುದು, ಆದರೆ ಅದು ಸೌಮ್ಯ ಲಕ್ಷಣಗಳನ್ನು ಹೊಂದಿದೆ ಎಂಬುದು ಮಾತ್ರ ದಾರಿ ತಪ್ಪಿಸುವ ವಿಷಯವಾಗಿದೆ. ಈ ರೀತಿ ವದಂತಿಗಳನ್ನು ಹಬ್ಬಿಸಿದರೆ ಅದರಿಂದ ಸಾವು-ನೋವುಗಳು ಹೆಚ್ಚಾಗುತ್ತದೆ" ಎಂದು ಘೆಬ್ರಿಯೆಸಸ್ ಎಚ್ಚರಿಸಿದ್ದಾರೆ
ಭಾರತದಲ್ಲಿ ಜ.19 ರಂದು ಒಂದೇ ದಿನ 2,82,970 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಕೋವಿಡ್-19 ನ ಯಾವುದೇ ರೂಪಾಂತರಿಯೂ ಅಪಾಯಕಾರಿಯಾಗಿದ್ದು ಸಾವಿಗೆ ಕಾರಣವಾಗಬಹುದು ಮುಂದಿನ ರೂಪಾಂತರಿಗಳು ಮತ್ತಷ್ಟು ಅಪಾಯಕಾರಿಯಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.