ಗೋರಖ್‌ಪುರ: ಯುವಕರಲ್ಲಿ ರಾಷ್ಟ್ರೀಯತೆಯ ಸಂದೇಶವನ್ನು ಹರಡಲು ಸುಮಾರು ಎರಡು ದಶಕಗಳ ಹಿಂದೆ ಸ್ಥಾಪನೆಯಾದ ಹಿಂದೂ ಯುವ ವಾಹಿನಿಯು ಕಳೆದ ಕೆಲವು ವರ್ಷಗಳಿಂದ ಬಹುತೇಕ ನಿಷ್ಕ್ರಿಯವಾಗಿತ್ತು. ಆದರೆ ಸಂಸ್ಥಾಪಕ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್ ಪುರದಿಂದ ಕಣಕ್ಕಿಳಿದ ಹಿನ್ನೆಲೆಯಲ್ಲಿ ಅವರ ಪರ ಪ್ರಚಾರ ಮಾಡಲು ಮತ್ತೆ ಸಕ್ರಿಯವಾಗಿದೆ.
ಗೋರಖ್‌ಪುರ ನಗರ ಕ್ಷೇತ್ರದಿಂದ ಬಿಜೆಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ ನಂತರ, ಯುವ ಸಂಘಟನೆಯ ಸದಸ್ಯರು ಕಾರ್ಯಪ್ರವೃತ್ತರಾಗಿದ್ದು, ಸಿಎಂಗೆ ಬೆಂಬಲ ಗಳಿಸಲು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿರುವ ವಾಹಿನಿ ಸದಸ್ಯರು "ಮಹಾರಾಜ್ ಜಿ(ಯೋಗಿ)" ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಹೈಲೈಟ್ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ.
2002ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆಯು ತ್ವರಿತವಾಗಿ ಪ್ರಾಮುಖ್ಯತೆಯನ್ನು ಗಳಿಸಿತು, ನಿರ್ದಿಷ್ಟವಾಗಿ ಗೋರಖ್‌ಪುರದಲ್ಲಿ, ಹೆಚ್ಚಿನ ಸಂಖ್ಯೆಯ ಯುವಕರು ಅದರ ಸದಸ್ಯರಾಗಿದ್ದಾರೆ.
2002ರಲ್ಲಿ ಆದಿತ್ಯನಾಥ್ ಅವರು ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಈ ವಾಹಿನಿ ಸ್ಥಾಪಿಸಿದ್ದರು.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಈ ಸಂಘಟನೆಯು ಆದಿತ್ಯನಾಥ್ ಅವರಿಗೆ ಒಂದು ಶಕ್ತಿಯಾಗಿ ಕೆಲಸ ಮಾಡಲಿದೆ.