ತಿರುವನಂತಪುರ: ಕೇರಳದಲ್ಲಿ ಪಡಿತರ ವಿತರಣೆ ಗುರುವಾರದಿಂದ ಸುಗಮಗೊಳ್ಳಲಿರುವುದಾಗಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಿ.ಆರ್ ಅನಿಲ್ ಘೋಷಿಸಿದರೂ, ರೇಶನ್ ಅಂಗಡಿಗಳಲ್ಲಿ ಮತ್ತೆ ಸಮಸ್ಯೆ ತಲೆದೋರಲಾರಂಭಿಸಿದೆ. ಸರ್ವರ್ ಸಮಸ್ಯೆ ಹಾಗೂ ಪಿಓಎಸ್ ಯಂತ್ರದಲ್ಲಿ ಓಟಿಪಿ ಲಭ್ಯವಾಗದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಎರಡು ವಾರಗಳಿಂದ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ರಾಜ್ಯದ 14ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ ಹಾಗೂ ಇತರ ಏಳು ಜಿಲ್ಲೆಗಳಲ್ಲಿ ಮಧ್ಯಾಹ್ನ 3ರಿಂದ 6ರ ವರೆಗೆ ಪಡಿತರ ಸಾಂಗ್ರಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಸರ್ವರ್ ಸಮಸ್ಯೆ ಪರಿಹರಿಸಿರುವುದಾಗಿ ಸರ್ಕಾರ ಘೋಷಿಸಿದ ಬೆನ್ನಿಗೆ ಗುರುವಾರ ಮತ್ತೆ ಸಮಸ್ಯೆ ತಲೆದೋರಿರುವುದು ಗ್ರಾಹಕರನ್ನು ಹಾಗೂ ಸಿಬ್ಬಂದಿಯನ್ನು ಕಂಗೆಡಿಸಿದೆ.
ಈ ಮಧ್ಯೆ ಪಡಿತರ ಸಾಮಗ್ರಿ ವಿತರಣೆಯ ಕಾಲಾವಧಿಯನ್ನು ಒಂದು ತಾಸು ಹೆಚ್ಚಳಗೊಳಿಸಿ ಸರ್ಕಾರ ಆದೇಶಿಸಿದೆ. ಎಲ್ಲ ರೇಶನ್ ಅಂಗಡಿಗಳಲ್ಲಿ ಬೆಳಗ್ಗೆ 8.30ರಿಂದ ಮಧ್ಯಹ್ನ 12.30, 3ರಿಂದ ಸಂಜೆ 6.30ರ ವರೆಗೆ ತೆರೆದು ಕಾರ್ಯಾಚರಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.