ಆಲಪ್ಪುಳ: ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜೀತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಪರಾರಿಯಾಗಲು ಸಹಾಯ ಮಾಡಿದ್ದ ಸುಹೇಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‌ಡಿಪಿಐ ಕಾರ್ಯಕರ್ತ ಸಾಕ್ಷಿ ನಾಶ ಸೇರಿದಂತೆ ಆರೋಪಗಳ ಮೇಲೆ ಬಂಧಿಸಲಾಗಿದೆ.
ಸುಹೇಲ್(೨೪) ಆಲಪ್ಪುಳದ ಮುಲ್ಲಾತ್ ವಾರ್ಡ್ನ ಶೀಜಾ ಮಂಜಿಲ್‌ನ ಸಿಯಾದ್ ಅವರ ಪುತ್ರ. ಆಲಪ್ಪುಳದ ಉಪ ಪೋಲೀಸ್ ವರಿಷ್ಠಾಧಿಕಾರಿ ಎನ್‌ಆರ್ ಜಯರಾಜ್ ನೇತೃತ್ವದಲ್ಲಿ ಆಲಪ್ಪುಳ ದಕ್ಷಿಣ ಠಾಣೆ ಇನ್ಸ್ಪೆಕ್ಟರ್ ಎಸ್ ಅರುಣ್ ಮತ್ತು ಸೈಬರ್ ಪೋಲೀಸ್ ಇನ್ಸ್ಪೆಕ್ಟರ್ ಎಂಕೆ ರಾಜೇಶ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.
ಇದರೊಂದಿಗೆ ರಂಜಿತ್ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ೧೨ಕ್ಕೆ ಏರಿಕೆಯಾಗಿದೆ ಎಂದು ಉಪ ಪೋಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಆದರೆ ಇದರಲ್ಲಿ ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡವರು ಆರು ಮಂದಿ ಮಾತ್ರ ಎಂದು ತಿಳಿದು ಬಂದಿದೆ. ಆರು ಬೈಕ್‌ಗಳಲ್ಲಿ ಬಂದಿದ್ದ ೧೨ ಮಂದಿ ರಂಜಿತ್ ಶ್ರೀನಿವಾಸನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಈ ಹಿಂದೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಉಳಿದವರ ಬಗ್ಗೆ ಮಾಹಿತಿ ಸಿಕ್ಕಿದ್ದು, ನೇರವಾಗಿ ಭಾಗವಹಿಸುವವರ ಗುರುತು ಪರೇಡ್ ನಡೆಯಲಿರುವುದರಿಂದ ಅವರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ. ಪ್ರತಿಯೊಂಬನನ್ನೂ ಕರೆದೊಯ್ದು ವಿಚಾರಣೆ ನಡೆಸಿದಾಗ ಬೇರೆ ಬೇರೆ ಸ್ಥಳಗಳಲ್ಲಿ ಹೆಚ್ಚಿನ ಸಾಕ್ಷ್ಯಗಳು ಮತ್ತು ಸುಳಿವುಗಳು ಸಿಗುತ್ತವೆ ಎಂದು ಪೋಲೀಸರು ತಿಳಿಸಿದ್ದಾರೆ.