ಜಿನೇವಾ: ಸಾಮಾನ್ಯವಾಗಿ ಶ್ರೀಮಂತರು ತೆರಿಗೆ ಕಟ್ಟುವುದರಿಂದ ಬಚಾವಾಗಲು ಚಾಪೆ ಕೆಲಗೆ ತೂರುವ ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜಗತ್ತಿನ ನೂರಕ್ಕೂ ಹೆಚ್ಚು ಕೋಟ್ಯಧಿಪತಿಗಳು ವಿಶ್ವ ಆರ್ಥಿಕ ಮಂಡಳಿಗೆ ಪತ್ರ ಬರೆದಿದ್ದಾರೆ.
ಪತ್ರ ಬರೆದಿರುವುದು ಅಚ್ಚರಿಯ ಸಂಗತಿಯೇನಲ್ಲ. ಆದರೆ, ಆ ಪತ್ರದಲ್ಲಿ ಕೋಟ್ಯಧಿಪತಿಗಳು ಸಲ್ಲಿಸಿರುವ ಮನವಿ ಅಚ್ಚರಿಯ ಸಂಗತಿ.
ವಿಶ್ವ ಆರ್ಥಿಕ ಮಂಡಳಿಗೆ ಬರೆದ ಪತ್ರದಲ್ಲಿ ಕೋಟ್ಯಧಿಪತಿಗಳು ತಮಗೆ ಈ ಕೂಡಲೆ ತೆರಿಗೆ ವಿಧಿಸುವಂತೆ ಮನವಿ ಮಾಡಿದ್ದಾರೆ. ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸುವುದರಿಂದ ಜಗತ್ತಿನ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಪಡೆಯುವುದು ಸಾಧ್ಯವಾಗುತ್ತದೆ. ಅಲ್ಲದೆ 2,300 ಕೋಟಿ ಜನರ ಬಡತನ ನಿರ್ಮೂಲನೆ ಮಾಡುವುದು ಸಾಧ್ಯವಾಗುತ್ತದೆ ಎಂದು ಇತ್ತೀಚಿಗೆ ನಡೆದ ಅಧ್ಯಯನ ಬಹಿರಂಗ ಪಡಿಸಿತ್ತು.
ತಮಗೆ ಹೆಚ್ಚಿನ ತೆರಿಗೆ ವಿಧಿಸುವಂತೆ ಮನವಿ ಮಾಡಿರುವ ಜಗತ್ತಿನ ಜನಪ್ರಿಯ ಕೋಟ್ಯಧಿಪತಿಗಳಲ್ಲಿ ಡಿಸ್ನಿ ಸಂಸ್ಥೆಯ ಮಾಲಕಿ ಕೂಡಾ ಸೇರಿದ್ದಾರೆ. ಪ್ರಸ್ತುತ ಇರುವ ತೆರಿಗೆ ಪದ್ಧತಿ ಸರಿಯಾಗಿಲ್ಲ ಎಂದಿರುವ ಅವರು ಇದರಿಂದಾಗಿ ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ, ಬಡವರು ಬಡವರಾಗುತ್ತಲೇ ಇದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.