ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿ ಹಾಗೂ ಹುತಾತ್ಮರ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಬಾಪು ಪುಣ್ಯತಿಥಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ಅವರ ಉದಾತ್ತ ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವುದು ನಮ್ಮೆಲ್ಲರ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ಹುತಾತ್ಮರ ದಿನದಂದು, ನಮ್ಮ ದೇಶವನ್ನು ಧೈರ್ಯದಿಂದ ರಕ್ಷಿಸಿದ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುತ್ತೇನೆ. ಅವರ ಸೇವೆ ಮತ್ತು ಧೈರ್ಯ ಸದಾ ಸ್ಮರಣೀಯ ಎಂದು ತಿಳಿಸಿದ್ದಾರೆ.
ಇಂದು ಪ್ರಸಾರವಾಗುವ 85 ನೇ ಸಂಚಿಕೆಯ ಮನ್ ಕಿ ಬಾತ್‍ನಲ್ಲಿ ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದು ವರ್ಷದ ಮೊದಲ ಆವೃತ್ತಿಯಾಗಲಿದೆ. ಗಾಂಧೀಜಿ ಅವರ ಪುಣ್ಯ ತಿಥಿಯಾದ್ದರಿಂದ ಅವರ ಸ್ಮರಣೆಯನ್ನು ಮಾಡಿದ ನಂತರ ರೇಡಿಯೋ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಮಹಾತ್ಮ ಗಾಂಧೀಜಿಯವರಿಗೆ ನಮನಗಳನ್ನು ಸಲ್ಲಿಸಿದ್ದು, 'ಬಾಪು' ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಸ್ವದೇಶಿ, ಸ್ವಭಾಷಾ ಮತ್ತು ಸ್ವರಾಜ್ಯ ಮನೋಭಾವವನ್ನು ತುಂಬಿದರು. ಅವರ ಆಲೋಚನೆಗಳು ಮತ್ತು ಆದರ್ಶಗಳು ಪ್ರತಿಯೊಬ್ಬ ಭಾರತೀಯನನ್ನು ರಾಷ್ಟ್ರದ ಸೇವೆ ಮಾಡಲು ಯಾವಾಗಲೂ ಪ್ರೇರೇಪಿಸುತ್ತವೆ. ಇಂದು, ಪೂಜ್ಯ ಬಾಪು ಅವರ ಪುಣ್ಯತಿಥಿಯಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆಂದು ಹೇಳಿದ್ದಾರೆ.