HEALTH TIPS

ಕೇಂದ್ರ ಸರಕಾರದ ಪದ್ಮ ಪ್ರಶಸ್ತಿಗಳಿಗೆ ಪ.ಬಂಗಾಳದ ಮೂವರು ಗಣ್ಯರ ತಿರಸ್ಕಾರ

               ನವದೆಹಲಿ :ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಗೌರವ ಪಟ್ಟಿಯಲ್ಲಿರುವ ಪ.ಬಂಗಾಳದ ಎಲ್ಲ ಮೂವರು ಪದ್ಮ ಪ್ರಶಸ್ತಿಗಳನ್ನು ತಿರಸ್ಕರಿಸಿದ್ದು, ಇದು ಕಳೆದ ವರ್ಷದ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದ ರಾಜ್ಯದಲ್ಲಿ ತೀವ್ರ ಮುಜುಗರದ ಸ್ಥಿತಿಯನ್ನು ಸೃಷ್ಟಿಸಿದೆ.

             ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕಟು ಟೀಕಾಕಾರರಾಗಿರುವ ಪ.ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಜಿಯವರು ಮಂಗಳವಾರ ಪ್ರಶಸ್ತಿಯನ್ನು ತಿರಸ್ಕರಿಸಿದ ಮೊದಲಿಗರಾಗಿದ್ದರು. ನಂತರ ರಾಜ್ಯದ ಇಬ್ಬರು ಗಣ್ಯ ಕಲಾವಿದರಾದ ತಬಲಾಪಟು ಪಂಡಿತ ಅನಿಂದ್ಯ ಚಟರ್ಜಿ ಮತ್ತು ಗಾಯಕಿ ಸಂಧ್ಯಾ ಮುಖ್ಯೋಪಾಧ್ಯಾಯ ಅವರೂ ತಮಗೆ ಘೋಷಿಸಲಾಗಿರುವ ಪ್ರಶಸ್ತಿಗಳನ್ನು ತಿರಸ್ಕರಿಸಿದ್ದಾರೆ. ಈ ನಡುವೆ ಪದ್ಮ ಪ್ರಶಸ್ತಿಗಳು ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿಯ ಬಿರುಕನ್ನು ಇನ್ನಷ್ಟು ತೀವ್ರಗೊಳಿಸಿವೆ.

            ನಾಲ್ಕನೇ ಅತ್ಯುಚ್ಚ ನಾಗರಿಕ ಗೌರವವಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿರುವ 90ರ ಹರೆಯದ ಸಂಧ್ಯಾ ಮುಖ್ಯೋಪಾಧ್ಯಾಯ (ಮುಖರ್ಜಿ ಎಂದೂ ಬಳಕೆಯಲ್ಲಿದೆ ),ಅದು ಕಿರಿಯ ಕಲಾವಿದರಿಗೆ ಸೂಕ್ತವಾಗಿದೆ,ತನ್ನ ಘನತೆಯ ಯಾರಿಗೂ ಅದು ಹೇಳಿಸಿದ್ದಲ್ಲ ಎಂದಿದ್ದಾರೆ. ಅವರು ಗಾಯನ ವೃತ್ತಿಯಲ್ಲಿ ಎಂಟು ದಶಕಗಳನ್ನು ಕಳೆದಿದ್ದಾರೆ.

           ಪ್ರಶಸ್ತಿ ಕುರಿತು ದಿಲ್ಲಿಯಿಂದ ಕರೆ ಬಂದಿದ್ದಾಗ,ತನ್ನ ವಯಸ್ಸಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ತನಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ತನ್ನ ತಾಯಿ ಹಿರಿಯ ಅಧಿಕಾರಿಗೆ ತಿಳಿಸಿದ್ದರು ಎಂದು ಹೇಳಿದ ಮುಖ್ಯೋಪಾಧ್ಯಾಯರ ಪುತ್ರಿ ಸೌಮಿ ಸೇನಗುಪ್ತಾ,ಪದ್ಮಶ್ರೀ ಪ್ರಶಸ್ತಿ ಕಿರಿಯ ಕಲಾವಿದರಿಗೆ ಹೆಚ್ಚು ಸೂಕ್ತವಾಗಿದೆಯೇ ಹೊರತು 'ಗೀತಾಶ್ರೀ ' ಸಂಧ್ಯಾ ಮುಖ್ಯೋಪಾಧ್ಯಾಯರಿಗಲ್ಲ ಎಂದು ಅವರ ಕುಟುಂಬ ಮತ್ತು ಅಭಿಮಾನಿಗಳು ಭಾವಿಸಿದ್ದಾರೆ ಎಂದರು.

              ಬಂಗಾಳದ ಅತ್ಯುತ್ತಮ ಗಾಯಕಿರಲ್ಲೋರ್ವರಾದ ಮುಖ್ಯೋಪಾಧ್ಯಾಯ,2011ರಲ್ಲಿ ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಗೌರವ 'ವಂಗ ವಿಭೂಷಣ'ಕ್ಕೆ ಪಾತ್ರರಾಗಿದ್ದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅದೇ ವರ್ಷ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದರು. 1970ರಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಮುಖ್ಯೋಪಾಧ್ಯಾಯ ಭಾಜನರಾಗಿದ್ದರು.

ತನ್ನ ಒಪ್ಪಿಗೆಯನ್ನು ಕೋರಿ ದಿಲ್ಲಿಯಿಂದ ದೂರವಾಣಿ ಕರೆ ಬಂದಾಗ ತಾನು ನಕಾರಾತ್ಮಕ ಸಂಕೇತವನ್ನು ನೀಡಿದ್ದೆ ಎಂದು ಪಂಡಿತ ರವಿಶಂಕರ,ಉಸ್ತಾದ ಅಮ್ಜದ್ ಅಲಿ ಖಾನ್ ಮತ್ತು ಉಸ್ತಾದ್ ಅಲಿ ಅಕ್ಬರ್ ಖಾನ್ರಂತಹ ದಿಗ್ಗಜರೊಂದಿಗೆ ಒಡನಾಡಿರುವ ಪಂಡಿತ ಅನಿಂದ್ಯ ಚಟರ್ಜಿ ತಿಳಿಸಿದರು.

'ನಾನು ವಿನಮ್ರವಾಗಿ ನಿರಾಕರಿಸಿದ್ದೆ. ನಿಮಗೆ ಧನ್ಯವಾದಗಳು,ಆದರೆ ನನ್ನ ವೃತ್ತಿಜೀವನದ ಈ ಹಂತದಲ್ಲಿ ಪದ್ಮಶ್ರೀ ಸ್ವೀಕರಿಸಲು ನಾನು ಸಿದ್ಧನಿಲ್ಲ. ನಾನು ಆ ಹಂತವನ್ನು ದಾಟಿದ್ದೇನೆ ಎಂದು ಅವರಿಗೆ ತಿಳಿಸಿದ್ದೆ 'ಎಂದರು.

              ಪಂಡಿತ ಜ್ಞಾನಪ್ರಕಾಶ ಘೋಷ್ ಅವರ ಶಿಷ್ಯರಾಗಿರುವ ಚಟರ್ಜಿ ಈ ಹಿಂದೆ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ನೀಡಿದ್ದಾರೆ ಮತ್ತು 1989ರಲ್ಲಿ ಬ್ರಿಟಿಷ್ ಸಂಸತ್ತಿನ ಕಾಮನ್ಸ್ ಸಭೆಯಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಿದ್ದ ಅತ್ಯಂತ ಕಿರಿಯ ತಬಲಾ ವಾದಕರಾಗಿದ್ದರು. 2002ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಅವರು ಪಡೆದಿದ್ದರು.

          ಮಂಗಳವಾರ ಮೂರನೇ ಅತ್ಯುಚ್ಚ ನಾಗರಿಕ ಗೌರವವಾದ ಪದ್ಮಭೂಷಣವನ್ನು ತಿರಸ್ಕರಿಸಿದ್ದ ಬುದ್ಧದೇವ ಭಟ್ಟಾಚಾರ್ಜಿ ಅವರು,'ಪದ್ಮಭೂಷಣದ ಬಗ್ಗೆ ನನಗೇನೂ ತಿಳಿದಿಲ್ಲ. ಆ ಬಗ್ಗೆ ಯಾರೂ ನನಗೆ ಏನನ್ನೂ ಹೇಳಿಲ್ಲ. ನಿಜಕ್ಕೂ ನನಗೆ ಪದ್ಮಭೂಷಣವನ್ನು ಪ್ರಕಟಿಸಿದ್ದರೆ ನಾನದನ್ನು ತಿರಸ್ಕರಿಸುತ್ತೇನೆ 'ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.

               ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ ಬಳಿಕ ಅದನ್ನು ಬಹಿರಂಗವಾಗಿ ತಿರಸ್ಕರಿಸುವುದು ಅಪರೂಪ. ಶಿಷ್ಟಾಚಾರದಂತೆ ಪ್ರಶಸ್ತಿಯ ಬಗ್ಗೆ ವಿಜೇತರಿಗೆ ಮೊದಲೇ ಕಡ್ಡಾಯವಾಗಿ ಮಾಹಿತಿ ನೀಡಲಾಗುತ್ತದೆ ಮತ್ತು ಅವರ ಒಪ್ಪಿಗೆಯ ಬಳಿಕವೇ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಭಟ್ಟಾಚಾರ್ಜಿಯವರ ಪ್ರಕರಣದಲ್ಲಿ ಗೃಹ ಸಚಿವಾಲಯದ ಅಧಿಕಾರಿಗಳು,ಕರೆಯನ್ನು ಭಟ್ಟಾಚಾರ್ಜಿಯವರ ಪತ್ನಿ ಸ್ವೀಕರಿಸಿದ್ದರು ಮತ್ತು ಪ್ರಶಸ್ತಿಗಾಗಿ ಗೃಹ ಕಾರ್ಯದರ್ಶಿಗಳಿಗೆ ಧನ್ಯವಾದ ಸೂಚಿಸಿದ್ದರು ಎಂದು ವಿವರಿಸಿದ್ದಾರೆ.

               ಈ ನಡುವೆ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಪ್ರಕಟಿಸಿರುವುದು ಕಾಂಗ್ರೆಸ್‌ನಲ್ಲಿ ಬಿರುಕನ್ನು ಹೆಚ್ಚಿಸಿದೆ. ಪಕ್ಷದಲ್ಲಿ ವ್ಯಾಪಕ ಸಂಘಟನಾತ್ಮಕ ಬದಲಾವಣೆಗಳಿಗೆ ಕರೆ ನೀಡಿದ್ದ ನಾಯಕರು ಗಾಂಧಿ ಕುಟುಂಬದ ನಿಷ್ಠಾವಂತರೊಂದಿಗೆ ಬಹಿರಂಗವಾಗಿ ಕಿತ್ತಾಡುತ್ತಿದ್ದಾರೆ. ಆನಂದ ಶರ್ಮಾ,ಕಪಿಲ ಸಿಬಲ್ ಮತ್ತು ಶಶಿ ತರೂರ್ರಂತಹ ನಾಯಕರು ಆಝಾದ್ ಅವರನ್ನು ಅಭಿನಂದಿಸಿದ್ದರೆ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಪ್ರಶಸ್ತಿಗೆ ಬುದ್ಧದೇವ ಭಟ್ಟಾಚಾರ್ಜಿಯವರ ತಿರಸ್ಕಾರವನ್ನು ಪ್ರಶಂಸಿಸಿದ್ದಾರೆ. ''ಅವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅವರು 'ಆಝಾದ್' ಆಗಿರಲು ಬಯಸಿದ್ದಾರೆ,'ಗುಲಾಮ್ ' ಆಗಿರಲು ಅಲ್ಲ '' ಎಂದು ತರೂರ್ ಟ್ವೀಟಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries