ನವದೆಹಲಿ: ಜಗತ್ತಿನಾದ್ಯಂತ ವ್ಯಾಪಕ ಭೀತಿ ಸೃಷ್ಟಿಸಿರುವ ಕೋವಿಡ್-19 ನೂತನ ರೂಪಾಂತರ ಓಮಿಕ್ರಾನ್ ನಿಂದ ಮಕ್ಕಳನ್ನು ರಕ್ಷಿಸಲು ಭಾರತ ಸರ್ಕಾರ ಪ್ರಪಂಚದಾದ್ಯಂತ ಆಸ್ಪತ್ರೆಗಳ ದತ್ತಾಂಶ ಮೇಲ್ವಿಚಾರಣೆ ತೊಡಗಿದೆ ಎನ್ನಲಾಗಿದೆ.
ಓಮಿಕ್ರಾನ್ ನಿಂದಾಗಿ ಜಗತ್ತಿನ ಹಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಈ ಬಗ್ಗೆ ಖುದ್ದು ಪರಿಶೀಲನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಭಾರತದ ಆರೋಗ್ಯ ಅಧಿಕಾರಿಗಳು ಭಾರತದಲ್ಲಿನ ಮಕ್ಕಳಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾದ ದರಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 31 ರಂದು ಲಭ್ಯವಿರುವ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ಮಾಹಿತಿಯ ಪ್ರಕಾರ, ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯಾ ಪ್ರಮಾಣ ಶೇ.66ರಿಂದ ಶೇ.378 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಗೆ ದಾಖಲಾದ ಹೆಚ್ಚಿನ ಮಕ್ಕಳು ಲಸಿಕೆ ಹಾಕಿಸಿಕೊಂಡಿಲ್ಲ. ಅಮೆರಿಕದಲ್ಲಿ ಪ್ರತಿನಿತ್ಯ ಸರಾಸರಿ 5.5 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗುತ್ತಿದೆ. ಇದೇ ಕಾರಣಕ್ಕೆ ಈ ದತ್ತಾಂಶಗಳ ಮೇಲೆ ಭಾರತೀಯ ತಜ್ಞರು ತೀವ್ರ ನಿಗಾವಹಿಸಿದ್ದಾರೆ.
ಮಕ್ಕಳ ಆಸ್ಪತ್ರೆಗೆ ದಾಖಲಾದ ಈ ಅಂಕಿಅಂಶಗಳು ಭಾರತಕ್ಕೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಇಲ್ಲಿಯವರೆಗೆ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿರಲಿಲ್ಲ. ಆದರೆ ಜಗತ್ತಿನ ಇತರೆ ದೇಶಗಳಲ್ಲಾಗುತ್ತಿರುವ ಬೆಳವಣಿಗೆಗಳಿಂದಾಗಿ ದೇಶದಲ್ಲಿ 15-17 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ಪ್ರೇರೇಪಿಸಿದೆ.
ಈ ಬಗ್ಗೆ ಮಾತನಾಡಿರುವ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಎನ್ ಕೆ ಅರೋರಾ ಅವರು, 18 ವರ್ಷದೊಳಗಿನವರ ಪೈಕಿ ಗರಿಷ್ಠ ಸಾವುಗಳು ಈ 15-17 ವರ್ಷ ವಯಸ್ಸಿನ ಗುಂಪಿನಲ್ಲಿ ದಾಖಲಾಗಿವೆ. ಹೀಗಾಗಿ 15-17 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕುವ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ದೈನಂದಿನ ಪ್ರಕರಣಗಳು ಮತ್ತು ಸಕ್ರಿಯ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚಾಗುವುದರಿಂದ ಆಸ್ಪತ್ರೆಗೆ ದಾಖಲಾಗುವ ಪ್ರವೃತ್ತಿಗಳ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರಗಳನ್ನು ಕೇಳಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ದತ್ತಾಂಶವನ್ನು ಕೇಂದ್ರೀಯವಾಗಿಯೂ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಇಲ್ಲಿಯವರೆಗೆ, ನಾವು ಯಾವುದೇ ಮಾದರಿಯನ್ನು ಸ್ಪಷ್ಟವಾಗಿ ನೋಡುತ್ತಿಲ್ಲ. ಆದರೆ ಹೊಸ ಸೋಂಕಿನ ಪತ್ತೆ ಮತ್ತು ಆಸ್ಪತ್ರೆಗೆ ದಾಖಲಾದ ದರಗಳ ನಡುವೆ ಯಾವಾಗಲೂ ವಿಳಂಬವಿರುವುದರಿಂದ ಕೆಲವೇ ದಿನಗಳಲ್ಲಿ ವಿಷಯಗಳು ಬದಲಾಗಬಹುದು ಎಂದು ಹೇಳಿದ್ದಾರೆ.
ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹಂಚಿಕೊಂಡ ಮಾಹಿತಿಯಂತೆ, 'ಕೇಂದ್ರ ಸರ್ಕಾರವು ಹಂಚಿಕೊಂಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, 7.2 ಲಕ್ಷ ಆಸ್ಪತ್ರೆ ಹಾಸಿಗೆಗಳ ದಾಸ್ತಾನುಗಳಲ್ಲಿ, 24,000 ಪೀಡಿಯಾಟ್ರಿಕ್ ಐಸಿಯು ಹಾಸಿಗೆಗಳನ್ನು ಹೊರತುಪಡಿಸಿ, ದೇಶದಲ್ಲಿ 64,000 ಮಕ್ಕಳ ಹಾಸಿಗೆಗಳು ಲಭ್ಯವಿದೆ. ಈ ಹಿಂದೆ ಗರಿಷ್ಠ 5-6 ಲಕ್ಷ ದೈನಂದಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ ಸಿದ್ಧತೆಗಳನ್ನು ನಡೆಸಲಾಗುತ್ತಿರುವುದರಿಂದ, ದೈನಂದಿನ ಸೋಂಕು ಪ್ರಕರಣ ಪತ್ತೆ ಹೆಚ್ಚಿದ್ದರೆ ಪರಿಸ್ಥಿತಿ ಕೈ ಮೀರಬಹುದು ಎಂದು ಕೆಲವು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.