ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲೂ ಮರಣೋತ್ತರ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡುವಂತೆ ಕೇರಳ ಸರ್ಕಾರ 2015ರಲ್ಲಿ ಹೊರಡಿಸಿದ ಆದೇಶ ಜಾರಿಗೊಳಿಸುವಂತೆ ಕೇರಳ ಹೈಕೋರ್ಟ್ ಆದೇಶಿಸಿದೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೂಲ ಸೌಲಭ್ಯವನ್ನು ಕಲ್ಪಿಸಿ ಒಂದು ತಿಂಗಳೊಳಗೆ ಸಿಬ್ಬಂದಿಗಳನ್ನು ನೇಮಿಸುವಂತೆ ಜಸ್ಟೀಸ್ ಪಿ. ವಿ. ಕುಂಞÂ್ಞ ಕೃಷ್ಣನ್ ಇತ್ತೀಚೆಗೆ ಆದೇಶಿಸಿದ್ದಾರೆ. ಈ ಆದೇಶ ಜಾರಿಯಾಗುವುದರೊಂದಿಗೆ ರಾತ್ರಿ ಸಮಯದಲ್ಲೂ ಮರಣೋತ್ತರ ಪರೀಕ್ಷೆ ನಡೆಸುವ ಏಕೈಕ ಆಸ್ಪತ್ರೆಯಾಗಲಿದೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲೂ ಮರಣೋತ್ತರ ಪರೀಕ್ಷೆ ನಡೆಸಲು ವ್ಯವಸ್ಥೆ ಕಲ್ಪಿಸುವಂತೆ ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ 2011ರಿಂದ 11 ಬಾರಿ ಗೊತ್ತುವಳಿ ಮಂಡಿಸಿದರು. ನಂತರ ಕಾಸರಗೋಡು ಜನರಲ್ ಆಸ್ಪತ್ರೆ ಸಹಿತ ಐದು ವೈದ್ಯಕೀಯ ಕಾಲೇಜುಗಳಲ್ಲಿ ರಾತ್ರಿ ಸಮಯ ಮರಣೋತ್ತರ ಪರೀಕ್ಷೆ ನಡೆಸಲು 2015ರ ಅಕ್ಟೋಬರ್ 26 ರಂದು ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರ ಆದೇಶ ಹೊರಡಿಸಿ ಐದು ವರ್ಷದ ಬಳಿಕ ಹೈಕೋರ್ಟ್ ತೀರ್ಪು ಮೂಲಕ ಇದೀಗ ಬೇಡಿಕೆ ಈಡೇರಿದೆ.
ವೈದ್ಯರ ಸಂಘಟನೆ ವಿರೋಧ:
ಆದೇಶದ ವಿರುದ್ಧ ವೈದ್ಯರ ಸಂಘಟನೆ ನ್ಯಾಯಾಲಯದಲ್ಲಿ ವಿರೋಧಿಸಿದರು. ಮರಣೋತ್ತರ ಪರೀಕ್ಷೆ ಹಗಲು ಬೆಳಕಿನಲ್ಲಿ ಆಗಬೇಕೆಂಬ ಮಾನದಂಡ ಪ್ರಕಾರ ರಾತ್ರಿ ಸಮಯದಲ್ಲಿ ಪ್ರಾಯೋಗಿಕವಲ್ಲ ಎಂಬುದಾಗಿ ವೈದ್ಯರ ಸಂಘಟನೆ ವಾದಿಸಿತು. ಈ ಸಂದರ್ಭದಲ್ಲಿ ಶಾಸಕ ಎನ್. ಎ. ನೆಲ್ಲಿಕುನ್ನು ನ್ಯಾಯಾಲಯದಲ್ಲಿ ಕಕ್ಷಿದಾರರಾಗಿ ಅತ್ಯಾಧುನಿಕ ಸಂವಿಧಾನ ಸೌಕರ್ಯಗಳಿರುವ ಈ ಕಾಲಘಟ್ಟದಲ್ಲಿ ವಿರೋಧ ಸಲ್ಲದು ಎಂದು ಹೇಳಿಕೆ ನೀಡಿದರು. ಅದನ್ನು ನ್ಯಾಯಾಲಯ ಮನಗಂಡು ಇದೀಗ ರಾತ್ರಿ ಸಮಯದಲ್ಲೂ ಮರಣೋತ್ತರ ಪರೀಕ್ಷೆ ನಡೆಸುವಂತೆ ವ್ಯವಸ್ಥೆ ಕಲ್ಪಿಸಲು ಆದೇಶ ನೀಡಿದೆ.
ಜನರಲ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 25 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಧಾನವಾಗಿ ಅಪಘಾತ, ನೀರಿನಲ್ಲಿ ಮುಳುಗಿ ಸಾವು ಮುಂತಾದ ಪ್ರಕರಣಗಳಲ್ಲಿ ಸಂಜೆ 4 ಗಂಟೆ ಬಳಿಕ ಆಸ್ಪತ್ರೆಗೆ ಬರುವ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಮರುದಿನ 10 ಗಂಟೆಯ ತನಕ ಕಾಯಬೇಕಾಗುತ್ತಿತ್ತು.
ಇದಕ್ಕಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರಕ್ಕೆ ಕಳೆದ ವರ್ಷ ಅಧಿಕ ಬೆಳಕಿನ ವ್ಯವಸ್ಥೆಯನ್ನು ಏರ್ಪಡಿಸಿ ನವೀಕರಿಸಲಾಗಿತ್ತು. ಇನ್ನು ಇದಕ್ಕೆ ಬೇಕಾದ ವೈದ್ಯರು ಹಾಗೂ ಪಾರಾ ಮೆಡಿಕಲ್ ಸಿಬ್ಬಂದಿಗಳನ್ನಷ್ಟೆ ನೇಮಿಸಿದರೆ ಸಾಕಾಗಬಹುದು.
ರಾತ್ರಿ ಸಮಯದಲ್ಲಿ ಕರ್ತವ್ಯದಲ್ಲಿರುವ ವೈದ್ಯರು ಹಗಲು ಸಮಯದಲ್ಲಿ ಚಟುವಟಿಕೆ ಮೊಟಕುಗೊಳ್ಳಲಿದೆ. ಅದಕ್ಕಾಗಿಯೇ ಫಾರೆನ್ಸಿಕ್ ಸರ್ಜನ್, ಇಬ್ಬರು ನರ್ಸಿ|ಂಗ್ ಅಸಿಸ್ಟೆಂಟ್, ಮೂವರು ಆಸ್ಪತ್ರೆ ಅಸಿಸ್ಟೆಂಟ್ ಗ್ರೇಡ್ 2 ಸಿಬ್ಬಂದಿಗಳನ್ನು ನೇಮಿಸುವಂತೆ ಆಸ್ಪತ್ರೆ ಸೂಪರಿಂಟೆಂಡೆಂಟ್ ವರದಿ ಸಲ್ಲಿಸಿದ್ದಾರೆ. ಅಸ್ವಾಭಾವಿಕ ಮರಣದಂತಹ ಪ್ರಕರಣಗಳಲ್ಲಿ ನಿರ್ದಿಷ್ಟ ಸಮಯದ ಒಳಗೆ ಮೃತದೇಹ ಪಂಚನಾಮೆ, ಮರಣೋತ್ತರ ಪರೀಕ್ಷೆ ಪೂರ್ತಿಗೊಳಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.
ಅಭಿಮತ:
'ನನ್ನ ನಿರಂತರ ಬೇಡಿಕೆಯ ಫಲವಾಗಿ ಇಂತಹ ಆದೇಶ ನ್ಯಾಯಾಲಯ ಹೊರಡಿಸಿರುವುದು ಸಂತೋಷ ತಂದಿದೆ. ಕಾನೂನು ಹೋರಾಟವಲ್ಲದೇ ಶಾಸಕರ ಅಭಿವೃದ್ಧಿ ನಿಧಿ ಉಪಯೋಗಿಸಿ 4 ಪ್ರೀಸರ್ ಗಳನ್ನು ಆಸ್ಪತ್ರೆಗೆ ಖರೀದಿಸಲಾಗಿದೆ. ರಾತ್ರಿ ಪೋಸ್ಟ್‍ಮಾರ್ಟಂ ನಡೆಸಲು ಅಗತ್ಯದ ಬೆಳಕಿನ ವ್ಯವಸ್ಥೆ ಆಸ್ಪತ್ರೆ ಕಲ್ಪಿಸಿ'
-ಎನ್.ಎ.ನೆಲ್ಲಿಕುನ್ನು
ಕಾಸರಗೋಡು ಶಾಸಕ