ನೋಯ್ಡಾ: ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು, ಕೃಷಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸೋಮವಾರ ದೇಶಾದ್ಯಂತ “ದ್ರೋಹಿ ದಿನ” ಆಚರಿಸುವುದಾಗಿ ಘೋಷಿಸಿದ್ದಾರೆ.
ಡಿಸೆಂಬರ್ 9 ರಂದು ಸರ್ಕಾರದ ಭರವಸೆಯ ಪತ್ರದ ಆಧಾರದ ಮೇಲೆ ದೆಹಲಿಯ ಗಡಿಯಲ್ಲಿ ಒಂದು ವರ್ಷದಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಆದರೆ ಕೇಂದ್ರ ಸರ್ಕಾರ ಇದುವರೆಗೂ ಭರವಸೆ ಈಡೇರಿಸಿಲ್ಲ ಎಂದು ಪ್ರಭಾವಿ ಉತ್ತರ ಭಾರತದ ರೈತ ಸಂಘದ ರಾಷ್ಟ್ರೀಯ ವಕ್ತಾರರು ಹೇಳಿದ್ದಾರೆ.
ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿರುವ ಹಿನ್ನೆಲೆಯಲ್ಲಿ ಜನವರಿ 31ರಂದು ರಾಷ್ಟ್ರವ್ಯಾಪಿ ‘ದ್ರೋಹ ದಿನ’ ಆಚರಿಸಲಾಗುವುದು. ಡಿಸೆಂಬರ್ 9 ರಂದು ಸರ್ಕಾರ ನೀಡಿದ ಪತ್ರದ ಆಧಾರದ ಮೇಲೆ ಚಳುವಳಿಯನ್ನು ವಾಪಸ್ ಪಡೆಯಲಾಯಿತು. ಆದರೆ ಆ ಭರವಸೆಗಳನ್ನು ಈಡೇರಿಸಲಾಗಿಲ್ಲ" ಎಂದು ರಾಕೇಶ್ ಟಿಕಾಯತ್ ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ 2020 ರ ನವೆಂಬರ್‌ನಲ್ಲಿ ವಿವಿಧ ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ದೆಹಲಿಯ ಗಡಿಗಳಲ್ಲಿ ನಿರಂತರ ಒಂದು ವರ್ಷ ಪ್ರತಿಭಟನೆ ನಡೆಸಲಾಗಿತ್ತು.