ನವದೆಹಲಿ: ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಳದ ನಡುವೆ ದೇಶದಲ್ಲಿನ ಕೊರೋನಾ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂವಾದ ನಡೆಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮುನ್ಸೂಖ್ ಮಾಂಡವೀಯಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.
ಒಮಿಕ್ರಾನ್ ದಿನೇ ದಿನೇ ಹೆಚ್ಚಾಗುತ್ತಿದೆ. ಸೋಂಕಿನಿಂದ ಆತಂಕಪಡುವ ಅಗತ್ಯವಿಲ್ಲ. ಸೋಂಕು ನಿಯಂತ್ರಿಸಲು ಸರ್ಕಾರದಿಂದ ಕ್ರಮ, ರೂಪಾಂತರಿ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದ್ದು, ಸೋಂಕು ಹರಡುದಂತೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನಿ ಸೂಚಿಸಿದ್ದಾರೆ.
ಲಸಿಕೆ ಬಗ್ಗೆ ವದಂತಿಗಳಿಗೆ ಕಿವಿಗೂಡಬಾರದು. ಸ್ಥಳೀಯವಾಗಿ ಕಂಟೈನ್ ಮೆಂಟ್ ನಿಯಮ ಪಾಲಿಸಿ, ಹೋಂ ಐಸೋಲೇಷನ್ ಚಿಕಿತ್ಸೆಗೆ ಆದ್ಯತೆ ನೀಡಿ, ಕೋವಿಡ್ ಸೋಂಕಿತರಿಗೆ ಟೆಲಿ ಮೆಡಿಸನ್ ಸಹಕಾರಿಯಾಗಿದೆ. ಎಲ್ಲಾ ರೀತಿಯ ಪ್ರಭೇದ ಎದುರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಪರಿಸ್ಥಿತಿ ನಿರ್ವಹಣೆಗಾಗಿ ರಾಜ್ಯಗಳ ಜೊತೆಗೆ ಸಹಕರಿಸಲು ಕೇಂದ್ರ ಸಿದ್ಧವಿದೆ ಎಂದು ಪ್ರಧಾನಿ ರಾಜ್ಯಗಳಿಗೆ ಆಭಯ ನೀಡಿದ್ದಾರೆ.
ಹಿಂದಿನ ರೂಪಾಂತರಿಗಳಿಗೆ ಹೋಲಿಸಿದರೆ ಒಮಿಕ್ರಾನ್ ವೇಗವಾಗಿ ಹರಡುತ್ತಿದೆ. ನಮ್ಮ ಆರೋಗ್ಯ ತಜ್ಞರು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ನಾವು ಎಚ್ಚರಿಕೆ ವಹಿಸಬೇಕಾಗಿದೆ.ಆರೋಗ್ಯ ಮೂಲಸೌಕರ್ಯ ಬಲಗೊಳಿಸಲು ಕೇಂದ್ರದಿಂದ 23,000 ಕೋಟಿ ರೂ. ಪ್ಯಾಕೇಜ್ ನ್ನು ರಾಜ್ಯಗಳಿಗೆ ನೀಡಲಾಗಿದ್ದು, ಕೆಲವು ರಾಜ್ಯಗಳು ಸದುಪಯೋಗ ಮಾಡಿಕೊಂಡಿರುವುದಾಗಿ ಪ್ರಧಾನಿ ತಿಳಿಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.