ನವದೆಹಲಿ: ಭಾರತ ತಂಡದ ಟೆಸ್ಟ್ ಸಾರಥ್ಯ ತೊರೆದ ವಿರಾಟ್ ಕೊಹ್ಲಿ ಬಗ್ಗೆ ಅನುಷ್ಕಾ ಹೇಳಿದ್ದೇನು? ಎಲ್ಲ ಕ್ರೀಡಾಪ್ರೇಮಿಗಳಿಗೆ ಈ ಒಂದು ಕುತೂಹಲ ಇದ್ದೆ ಇದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ವಿರಾಟ್ ಕೊಹ್ಲಿ ಕ್ರಿಕೆಟ್ ಜೀವನದಲ್ಲಿ ಅನೇಕ ಏರಿಳಿತಗಳು ಕಾಣಿಸಿಕೊಂಡಿದ್ದವು.
ಇತರರಿಗೆ ಹೋಲಿಕೆ ಮಾಡಿದ್ರೆ ಇಷ್ಟು ಕಡಿಮೆ ಅವಧಿಯಲ್ಲಿ 70ಕ್ಕೂ ಹೆಚ್ಚು ಶತಕಗಳನ್ನು ಬಾರಿಸಿದ್ದರೂ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅವರಲ್ಲಿ ಕಾಣಿಸಿಕೊಂಡಿತ್ತು. ಇದಲ್ಲದೇ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತ ನಂತರ ಕೊಹ್ಲಿ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳ ಎದ್ದಿದ್ದವು. ಇದಾದ ಬಳಿಕ ದಿಢೀರಂತ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ವಿರಾಟ್ ನಾಯಕತ್ವ ತೊರೆದ ಬಳಿಕ ಅವರ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಭಾವನೆಗಳು ಹೇಗೆ ಇದ್ದವು ಅನ್ನೋದರ ಬಗ್ಗೆ ಹಂಚಿಕೊಂಡಿದ್ದಾರೆ.
ವಿರಾಟ್ ನ ನಗುವಿನ ಫೋಟೋವನ್ನು ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅದರಡಿ 'ಧೋನಿ ಕ್ರಿಕೆಟ್ ಗೆ ವಿದಾಯ ಹೇಳಿದಾಗ ನೀವು 2014ರಲ್ಲಿ ಭಾರತೀಯ ಟೆಸ್ಟ್ ತಂಡದ ನಾಯಕರಾಗಿದ್ದೀರಿ ಎಂದು ಹೇಳಿದ ದಿನ ನನಗೆ ನೆನಪಿದೆ. ಬಳಿಕ ನಾನು, ನೀವು ಮತ್ತು ಧೋನಿ ಈ ಬಗ್ಗೆ ಮಾತುಕತೆ ನಡೆಸಿದ್ದೆವು. ಇನ್ನು ಮುಂದೆ ನಿನ್ನ ಗಡ್ಡ ಎಷ್ಟು ಬೇಗ ಬೆಳ್ಳಗಾಗುತ್ತೆ ನೋಡು ಎಂದು ಧೋನಿ ಹೇಳಿದ್ದರು. ಈ ಮಾತಿಗೆ ಅಂದು ನಾವೆಲ್ಲ ತುಂಬಾ ನಕ್ಕಿದ್ದೆವು. ಅಂದಿನಿಂದ ನಿಮ್ಮ ಗಡ್ಡ ಬೆಳ್ಳಗಾಗುವುದನ್ನು ನಾನು ನೋಡಿದ್ದೇನೆ. ಗಡ್ಡ ಬಿಳಿಯಾಗುವುದಷ್ಟೇ ಅಲ್ಲ, ಉಳಿದೆಲ್ಲ ವಿಚಾರಗಳ ಬಗ್ಗೆ ಕಂಡುಕೊಂಡಿದ್ದೇನೆ. ಭಾರತ ಕ್ರಿಕೆಟ್ ತಂಡದ ನಾಯಕನಾಗಿ ನಿಮ್ಮ ಬೆಳವಣಿಗೆ ಮತ್ತು ಸಾಧನೆಗಳ ಬಗ್ಗೆ ನನಗೆ ಹೆಮ್ಮೆಇದೆ. ಆದರೆ ಅದಕ್ಕಿಂತ ಹೆಚ್ಚಾಗಿ, ನಿಮ್ಮ ಆಂತರಿಕ ಬೆಳವಣಿಗೆಯ ಬಗ್ಗೆಯೂ ತುಂಬಾ ಹೆಮ್ಮೆ ಇದೆ.
2014ರಲ್ಲಿ ನೀವು ತುಂಬಾ ಚಿಕ್ಕವರಾಗಿದ್ದಾಗ ಒಳ್ಳೆಯ ಉದ್ದೇಶಗಳು, ಸಕಾರಾತ್ಮಕ ಗುರಿಗಳು ನಿಮ್ಮನ್ನು ಇಂದಿಗೂ ಜೀವನದಲ್ಲಿ ಮುನ್ನಡೆಸುತ್ತವೆ. ನೀವು ಎದುರಿಸಿದ ಬಹಳಷ್ಟು ಸವಾಲುಗಳು ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಸೇರಿವೆ. ಬಹುಶಃ ಇದುವೇ ಜೀವನ ಹೌದಲ್ಲವೇ? ನಿಮ್ಮ ಅನುಭವವನ್ನು ಹಾಗೂ ಬಲದೊಂದಿಗೆ ಭಾರತ ತಂಡದ ಪ್ರತಿ ಜಯದಲ್ಲಿ ಧಾರೆ ಎರೆದಿದ್ದೀರಿ. ಕೆಲವು ಪಂದ್ಯಗಳ ಸೋಲಿನ ಬಳಿಕ ನಿಮ್ಮ ಪಕ್ಕದಲ್ಲಿ ಕುಳಿತು ಕಣ್ಣೀರು ಹರಿಯುವುದನ್ನು ನೋಡಿದ್ದೇನೆ. ಪಂದ್ಯ ಸೋಲಲು ಕಾರಣ ಏನು? ಹೇಗೆ ಸುಧಾರಿಸಬಹುದಿತ್ತು ಅನ್ನೋ ಬಗ್ಗೆ ನೀವು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿದ್ದೀರಿ. ನಿಮ್ಮ ರೀತಿಯಲ್ಲೇ ಉತ್ಸಾಹ ಹಾಗೂ ಲೆಕ್ಕಾಚಾರ ಬೇರೆಯವರಿಂದಲೂ ನಿರೀಕ್ಷೆ ಮಾಡಿದ್ದೀರಿ. ನೀವು ಯಾವಾಗ್ಲೂ ಅಸಾಂಪ್ರದಾಯಿಕ ಮತ್ತು ಬಹಿರಂಗವಾಗಿಯೂ ಇದೇ ರೀತಿ ಕಾಣಿಸಿಕೊಳ್ಳುತ್ತೀರಿ” ಎಂದು ಅನುಷ್ಕಾ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಕೈಗೊಳ್ಳುವ ಪ್ರತಿಯೊಂದು ಪ್ರವಾಸದಲ್ಲೂ ತಮ್ಮ ಕುಟುಂಬವನ್ನು ಕರೆದೊಯ್ಯುತ್ತಿದ್ದರು. ದುಬೈ ವರ್ಲ್ಡ್ ಕಪ್ ಟಿ-20ಯಲ್ಲೂ ಅನುಷ್ಕಾ ಶರ್ಮಾ ಹಾಗೂ ಮಗಳು ವಾಮಿಕಾ ಕೂಡ ಇದ್ದರು. ಅನೇಕ ಬಾರಿ ಗ್ರೌಂಡ್ ನಲ್ಲಿ ಅನುಷ್ಕಾ ತನ್ನ ಪತಿಯನ್ನು ಪ್ರೋತ್ಸಾಹಿಸುತ್ತಿದ್ದುದನ್ನು ನಾವೆಲ್ಲ ನೋಡಿದ್ದೇವೆ.