ಉಪ್ಪಿಲ್ಲದೇ ಯಾವುದೇ ರೀತಿಯ ಆಹಾರ ಅಪೂರ್ಣ. ಎಂತಹ ಪದಾರ್ಥ ಬೆರೆಸಿದರೂ, ಉಪ್ಪು ಹಾಕದ ಆಹಾರ ಎಂದಿಗೂ ರುಚಿಸದು. ಆದರೆ, ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿದೆಯೇ?. ಹೌದು, ಉಪ್ಪು ನಮ್ಮ ಆಹಾರದ ಜೊತೆಗೆ, ಸೌಂದರ್ಯಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹಾಗಾದರೆ, ಉಪ್ಪಿನಿಂದ ಚರ್ಮ ಹಾಗೂ ಕೂದಲಿಗೆ ಆಗುವ ಲಾಭಗಳೇನು ಎಂಬುದನ್ನು ನೋಡಿಕೊಂಡು ಬರೋಣ.
ಉಪ್ಪು ನೀರಿನಿಂದ ಸೌಂದರ್ಯದ ಲಾಭಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:1.ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುವುದು: ಸ್ನಾನ ಮಾಡುವಾಗ ನೀರಿಗೆ ಉಪ್ಪನ್ನು ಸೇರಿಸುವುದರಿಂದ ಚರ್ಮವು ಆಳವಾಗಿ ಸ್ವಚ್ಛವಾಗುತ್ತದೆ. ಉಪ್ಪು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ಚೆನ್ನಾಗಿ ತೆಗೆದುಹಾಕುತ್ತದೆ ಮತ್ತು ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ.
2. ಕೂದಲಿನ ಜಿಡ್ಡಿನಾಂಶ ತೊಲಗಿಸುವುದು: ನೀವು ಕೂದಲಿನ ಜಿಡ್ಡಿನಾಂಶದಿಂದ ತೊಂದರೆಗೊಳಗಾಗಿದ್ದರೆ, ನಂತರ ನೀರಿನಲ್ಲಿ ಉಪ್ಪು ಬೆರೆಸಿ ಕೂದಲನ್ನು ತೊಳೆಯಿರಿ. ಇದು ನಿಮ್ಮ ಎಣ್ಣೆಯುಕ್ತ ಕೂದಲನ್ನು ಕಡಿಮೆ ಮಾಡುವುದಲ್ಲದೇ, ಕೂದಲಿನಲ್ಲಿ ಹೊಳಪು ತರುತ್ತದೆ ಜೊತೆಗೆ ಎಣ್ಣೆಯುಕ್ತ ಚರ್ಮಕ್ಕೆ ಉಪ್ಪು ನೀರು ತುಂಬಾ ಪ್ರಯೋಜನಕಾರಿಯಾಗಿದೆ.
3. ಸ್ನಾಯುನೋವನ್ನು ಕಡಿಮೆಮಾಡುವುದು: ನಿಮ್ಮ ಸ್ನಾಯುಗಳು ಉದ್ವಿಗ್ನವಾಗಿದ್ದರೆ ಅಥವಾ ನೋಯುತ್ತಿದ್ದರೆ, ಖಂಡಿತವಾಗಿಯೂ ಉಪ್ಪು ನೀರಿನಿಂದ ಸ್ನಾನ ಮಾಡಬೇಕು. ಇದು ನಿಮಗೆ ಹೆಚ್ಚಿನ ಮಟ್ಟಿಗೆ ಪರಿಹಾರವನ್ನು ನೀಡುತ್ತದೆ. ಇದರೊಂದಿಗೆ, ಇದು ಕೀಲು ನೋವಿನ ಪರಿಹಾರವನ್ನು ಸಹ ನೀಡುತ್ತದೆ.
4.ಚರ್ಮದ ಸೋಂಕು ನಿವಾರಿಸುವುದು: ಸೋಂಕು ಅಥವಾ ತುರಿಕೆಯಂತಹ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ನಿಮಗೆ ಪರಿಹಾರ ಸಿಗುತ್ತದೆ. ಉಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇದ್ದು, ಇದು ಚರ್ಮದ ಸೋಂಕನ್ನು ನಿವಾರಿಸುತ್ತದೆ.
5. ತ್ವಚೆಯಲ್ಲಿ ಹೊಳಪು: ನಿಮಗೆ ತ್ವರಿತ ಹೊಳಪು ಬೇಕಾದರೆ, ಸ್ನಾನ ಮಾಡುವ ನೀರಿಗೆ ಎರಡು ಚಮಚ ಉಪ್ಪನ್ನು ಸೇರಿಸಿ. ಇದರೊಂದಿಗೆ, ನಿಮ್ಮ ಚರ್ಮವು ಪ್ರಕಾಶಮಾನವಾಗಿ ಕಾಣುವುದು ಮಾತ್ರವಲ್ಲದೆ, ನಿಮ್ಮ ಮುಖದ ಮೇಲೆ ಕಲೆಗಳು ಅಥವಾ ಮೊಡವೆಗಳಿದ್ದರೆ, ಅದು ಕ್ರಮೇಣ ಹಗುರವಾಗುತ್ತದೆ.
6. ಒಡೆದ ಹಿಮ್ಮಡಿಗಳಿಗೆ ಚಿಕಿತ್ಸೆ: ಉಪ್ಪು ನೀರು ಒಡೆದ ಪಾದಗಳನ್ನು ನಯವಾಗಿಸುವುದು ಮತ್ತು ಚರ್ಮದ ಸತ್ತಕೋಶಗಳನ್ನು ಕಿತ್ತುಹಾಕುವುದು. ಇದು ಸೋಂಕು ಮತ್ತು ಕಿರಿಕಿರಿಯನ್ನು ಕೂಡ ದೂರ ಮಾಡುವುದು. ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪು ಹಾಕಿ. ಇದರಲ್ಲಿ 10 ನಿಮಿಷ ಕಾಲ ಪಾದಗಳನ್ನು ಮುಳುಗಿಸಿಡಿ, ಬಳಿಕ ಪ್ಯುಮಿಕ್ ಕಲ್ಲಿನಿಂದ ಚರ್ಮದ ಸತ್ತ ಕೋಶಗಳನ್ನು ಉಜ್ಜಿ ತೆಗೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿದರೆ, ಒಡೆದ ಹಿಮ್ಮಡಿಯಿಂದ ಪರಿಹಾರ ಸಿಗುವುದು.
7. ಪಾದದ ದುರ್ವಾಸನೆ ನಿವಾರಿಸುವುದು: ಪಾದಗಳಲ್ಲಿ ದುರ್ವಾಸನೆಯು ಬರುತ್ತಿದ್ದರೆ, ಅದನ್ನು ದೂರ ಮಾಡಲು ತುಂಬಾ ಅಗ್ಗ ಹಾಗೂ ಪರಿಣಾಮಕಾರಿ ಮನೆಮದ್ದು ಈ ಉಪ್ಪು ನೀರು. ಪಾದಗಳನ್ನು ಉಪ್ಪು ನೀರಿನಲ್ಲಿ ಅದ್ದಿಟ್ಟುಕೊಂಡರೆ, ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಬರುವ ದುರ್ವಾಸನೆಯು ದೂರವಾಗುವುದು. ಏಕೆಂದರೆ ಉಪ್ಪು ನೀರಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ದೂರ ಮಾಡುವುದು.