ಬೀಜಿಂಗ್: ಕೊರೋನಾ ವೈರಸ್ ಹೊಸ ಹೊಸ ರೂಪಾಂತರಿಗಳು ಭಾರತ ಸೇರಿದಂತೆ ಇಡೀ ಜಗತ್ತಿನಲ್ಲೇ ತೀವ್ರ ಆತಂಕ ಸೃಷ್ಟಿಸುತ್ತಿರುವುದರ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳ ನಡುವೆ ಹರಡುವ ನಿಯೋಕೋವ್ ಹೊಸ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದು ಭವಿಷ್ಯದಲ್ಲಿ ಮನುಷ್ಯರಿಗೂ ಅಪಾಯವನ್ನುಂಟುಮಾಡುತ್ತದೆ ಎಂದು ಚೀನಾದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ನಿಯೋಕೋವ್ ವೈರಸ್(NeoCov) ವೈರಸ್ ತುಂಬಾ ಸಾಂಕ್ರಾಮಿಕವಾಗಿದ್ದು, ಹೆಚ್ಚು ಮಾರಣಾಂತಿಕವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಮೂವರು ಸೋಂಕಿತರಲ್ಲಿ ಒಬ್ಬ ರೋಗಿ ಸಾವನ್ನಪ್ಪಬಹುದು ಎಂದು ಅಂದಾಜಿಸಿದ್ದಾರೆ.
ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿಯ ಪ್ರಕಾರ, ಹೊಸ ಕೊರೋನಾ ವೈರಸ್(Coronavirus) ನಿಯೋಕೋವ್ ಸಹ MERS-CoV ವೈರಸ್‌ಗೆ ಸಂಬಂಧಿಸಿದ್ದಾಗಿದೆ. ಇದು, 2012 ಮತ್ತು 2015ರಲ್ಲಿ ಪಶ್ಚಿಮ ಏಷ್ಯಾದ ದೇಶಗಳಲ್ಲಿ ಮೊದಲು ಪತ್ತೆಯಾಗಿತ್ತು.
ಈ ಹೊಸ ಕೊರೋನಾ ವೈರಸ್ ನಿಯೋಕೋವ್ ಇನ್ನೂ ಮನುಷ್ಯರಿಗೆ ಹರಡಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಈ ವೈರಸ್ ಬಾವಲಿಗಳಲ್ಲಿ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಈ ವೈರಸ್ ಪ್ರಾಣಿಗಳಲ್ಲಿ ಮಾತ್ರ ಕಂಡುಬಂದಿದೆ. ಆದರೆ ಅದರ ಮತ್ತಷ್ಟು ರೂಪಾಂತರಿಗಳು ಮನುಷ್ಯರಿಗೆ ತಗುಲಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ನಿಯೋಕೋವ್ ಮತ್ತು ಅದರ ನಿಕಟ ಸಂಬಂಧಿಯಾದ PDF-2180-CoV ದೇಹವನ್ನು ಪ್ರವೇಶಿಸಲು ಕೆಲವು ರೀತಿಯ ಬ್ಯಾಟ್ ಆಂಜಿಯೋಟೆನ್ಸಿನ್-ಪರಿವರ್ತಿಸುವ ಕಿಣ್ವ2(ACE2) ಮತ್ತು ಮಾನವ ACE2 ಅನ್ನು ಬಳಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನ ಹೇಳಿದೆ. ಕೊವಿಡ್ ವೈರಸ್ ರೂಪಾಂತರವು ಮಾನವನ ಜೀವಕೋಶಗಳಿಗೆ ಹರಡಲು ಕಾರಣವಾಗಬಹುದು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.