ಮೀರತ್: 'ಕ್ರಾಂತಿ ಮತ್ತು ಕ್ರೀಡೆಗಳ ನಗರ' ಎಂದು ಕರೆಯಲ್ಪಡುವ ಮೀರತ್‌ಗೆ ಭಾನುವಾರ ವಿಶೇಷ ದಿನವಾಗಲಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಳೆದ ಕೆಲ ದಿನಗಳಿಂದ ಉತ್ತರಪ್ರದೇಶದಲ್ಲಿರುವ ಪ್ರಧಾನಮಂತ್ರಿ ಮೋದಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಪ್ರದೇಶದ ಮೀರತ್‌ನ ಬಾಬಾ ಔಘರ್‌ನಾಥ್ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿಬೆನ್ ಪಟೇಲ್ ಕೂಡ ಮೋದಿ ಅವರಿಗೆ ಸಾಥ್ ನೀಡಿದರು.
ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಮೀರತ್‌ನಲ್ಲಿ 700 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ರಾಜ್ಯದ ಮೊದಲ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ ಪ್ರಧಾನಿ ಭಗವಾನ್ ಔಘರ್ ನಾಥ ದೇವಾಲಯ ಮತ್ತು ಹುತಾತ್ಮರ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ.
ಸರ್ಧಾನ ತಹಸಿಲ್‌ನ ಸಾಲ್ವಾದಲ್ಲಿ ಗಂಗಾನದಿ ಕಾಲುವೆಯ ದಡದಲ್ಲಿ 91.38 ಎಕರೆಯಲ್ಲಿ 700 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ನಿರ್ಮಿಸಲಾಗುವುದು. ಇದರ ಶಂಕುಸ್ಥಾಪನೆಗೆ ಆಗಮಿಸಲಿರುವ ಪ್ರಧಾನಿ ಮೀರತ್‌ನಲ್ಲಿ ಮೂರು ಗಂಟೆಗಳ ಕಾಲ ತಂಗಲಿದ್ದಾರೆ. ಪ್ರಧಾನಿ ಬೆಳಗ್ಗೆ 11.30ಕ್ಕೆ ಕ್ಯಾಂಟ್‌ನಲ್ಲಿರುವ ಸೇನಾ ಹೆಲಿಪ್ಯಾಡ್ ಮೂಲಕ ಬಂದಿಳಿದಿದ್ದಾರೆ. ಇದರ ನಂತರ ಹುತಾತ್ಮರ ಸ್ಮಾರಕಕ್ಕೆ ತೆರಳಲಿದ್ದಾರೆ. ಇಲ್ಲಿಂದ ಅವರು ಔಘಡನಾಥ ದೇವಾಲಯಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 12.40ಕ್ಕೆ ಸೇನಾ ಹೆಲಿಪ್ಯಾಡ್‌ನಿಂದ ಪ್ರಧಾನಿ ಸಲ್ವಾಗೆ ತೆರಳಲಿದ್ದಾರೆ. ಮಧ್ಯಾಹ್ನ ಒಂದು ಗಂಟೆಯಿಂದ 2.30ರವರೆಗೆ ಸಲಾವಾದಲ್ಲಿ ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ 32 ಆಟಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 2.45ಕ್ಕೆ ಸಾಲ್ವಾದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ನಿಂದ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ತೆರಳಲಿದ್ದಾರೆ.
ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಕಾರ್ಯಕ್ರಮದಲ್ಲಿ ರಾಜ್ಯದ 75 ಜಿಲ್ಲೆಗಳಿಂದ 16 ಸಾವಿರದ 850 ಆಟಗಾರರನ್ನು ಕರೆಸಲಾಗಿದೆ. ಅವರ ಕುಳಿತುಕೊಳ್ಳುವ ಜಾಗಕ್ಕೆ ಕ್ರೀಡಾಂಗಣದ ರೂಪ ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಸೇರಿದಂತೆ ಮುಜಾಫರ್‌ನಗರ ಮತ್ತು ಮೀರತ್ ಸಂಸದರು, ಶಾಸಕರು ಮತ್ತು ಫಲಾನುಭವಿಗಳು ಮತ್ತು ಸಮೀಪದ ಜಿಲ್ಲೆಗಳ ಸಾಮಾನ್ಯ ಜನರು ಭಾಗವಹಿಸಲಿದ್ದಾರೆ.
ಕಳೆದ ಬಾರಿ ಕಾನ್ಪುರದಲ್ಲಿ ಮೆಟ್ರೋ ರೈಲು ಯೋಜನೆಯ ಉದ್ಘಾಟನೆ ಮಾಡಿದ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ವಿರುದ್ಧ ಹರಿಹಾಯ್ದಿದ್ದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸುವ ದಿನ ಸನ್ನಿಹಿತವಾಗಿದೆ. ಇದರ ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವಾರು ಬಾರಿ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇತ್ತೀಚೆಗೆ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಆಡಳಿತ ಪಕ್ಷ ಬಿಜೆಪಿಯು ಯಾತ್ರೆಗಳನ್ನು ನಡೆಸುತ್ತಿದೆ. ಈ ಯಾತ್ರೆಗಳು ರಾಜ್ಯದ 403 ವಿಧಾನಸಭೆ ಕ್ಷೇತ್ರಗಳಿಗೂ ತಲುಪಲಿವೆ. ಈ ಯಾತ್ರೆಗಳು ಬಿಜೆಪಿ ಪರ ಪ್ರಚಾರದ ಭಾಗವಾಗಲಿವೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಭಾರತೀಯ ಜನತಾ ಪಕ್ಷವು ನಿಶಾದ್ ಪಾರ್ಟಿ ಮತ್ತು ಅಪ್ನಾ ದಳದ ಜೊತೆ ಮೈತ್ರಿ ಮಾಡಿಕೊಂಡಿದೆ.
ಮುಂದಿನ ವರ್ಷದ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದೆ. 2022ರ ನಂತರದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತಿನಲ್ಲಿ ಚುನಾವಣೆಗಳು ನಡೆಯಲಿವೆ.
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.