ಕುಂಬಳೆ: ಸಂಘಪರಿವಾರದ ಕಾರ್ಯಕರ್ತನಾಗಿದ್ದ ವಿನು ಕುಂಬಳೆ ಕೊಲೆಕೃತ್ಯದ ಆರೋಪಿಯೆಂದು ಕಾಸರಗೋಡು ಸೆಷನ್ಸ್ ಕೋರ್ಟ್ ಹಾಗೂ ರಾಜ್ಯ ಉಚ್ಚನ್ಯಾಯಾಲಯ ತೀರ್ಪು ನೀಡಿರುವ, ಪ್ರಸ್ತುತ ಕುಂಬಳೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರಾಗಿರುವ ಕೊಗ್ಗು ಎಸ್ ಇವರನ್ನು ಪಂ. ಆಡಳಿತ ಸಮಿತಿ ಸಭೆಯಲ್ಲಿ ಕುಳಿತುಕೊಳ್ಳಲು ಬಿಡಬಾರದೆಂದು ಆಗ್ರಹಿಸಿ ಬಿಜೆಪಿ ಕುಂಬಳೆ ಪಂಚಾಯತಿ ಸದಸ್ಯರು ಬುಧವಾರ ನಡೆದ ಗ್ರಾ.ಪಂ. ಆಡಳಿತ ಸಮಿತಿ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ರಾಜ್ಯ ಉಚ್ಚ ನ್ಯಾಯಾಲಯವು ಸೆಷನ್ಸ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದಿದ್ದು, ಆರೋಪ ಸಾಬೀತಾದಂತಾಗಿದೆ. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಆರೋಪಿಯಾದ ಗ್ರಾ.ಪಂ.ಸದಸ್ಯ ತನ್ನ ಸದಸ್ಯತನಕ್ಕೆ ರಾಜೀನಾಮೆ ನೀಡಬೇಕೆಂದು ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ಒತ್ತಾಯಿಸಿದೆ. ಕಾನೂನು ಸಲಹೆ ಪಡೆದು ಚುನಾವಣಾ ಆಯುಕ್ತರಿಗೆ ದೂರು ನೀಡಲು ಬಿಜೆಪಿ ಪಂಚಾಯತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕುಂಬಳೆಯ ಪಕ್ಷದ ಕಚೇರಿಯಲ್ಲಿ ಬುಧವಾರ ಕುಂಬಳೆ ಪಂಚಾಯತಿ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಮಂಡಲ ಅಧ್ಯಕ್ಷ ಸುನಿಲ್ ಕುಮಾರ್ ಅನಂತಪುರ, ಮಂಡಲ ಉಪಾಧ್ಯಕ್ಷ ರಮೇಶ್ ಭಟ್, ಪ್ರೇಮಲತಾ ಎಸ್, ಕುಂಬಳೆ ಪಂಚಾಯತಿ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಕುಮಾರ್ ಬಂಬ್ರಾಣ, ಗ್ರಾ.ಪಂ. ಜನಪ್ರತಿನಿಧಿಗಳಾದ ಪ್ರೇಮಾವತಿ, ಸುಲೋಚನ ಪೈ, ಮೋಹನ ಕೆ, ಅಜಯ ಎಂ, ಶೋಭಾ ಎಸ್, ವಿವೇಕಾನಂದ, ವಿದ್ಯಾ ಪೈ ಉಪಸ್ಥಿತರಿದ್ದು ಮಾತನಾಡಿದರು. ಕುಂಬಳೆ ಪಂಚಾಯತಿ ದಕ್ಷಿಣ ವಲಯ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾಯ್ಕಾಪು ಸ್ವಾಗತಿಸಿ, ಪುಷ್ಪಲತಾ ಪಿ. ಶೆಟ್ಟಿ ವಂದಿಸಿದರು.