ತಿರುವನಂತಪುರಂ: ಕೇರಳದ ನೆಟ್ಟುಕಲ್ತೇರಿ ಕಾರಾಗೃಹದ ಕೈದಿಗಳ ಸಿಲಬಸ್ ಗೆ ಹೊಸ ಕೋರ್ಸ್ ಪ್ರಾರಂಭವಾಗಿದೆ. ಇದುವರೆಗೂ ಕೈದಿಗಳು ಪೀಠೋಪಕರಣ ತಯಾರಿ, ಕರಕುಶಲ ವಸ್ತು ತಯಾರಿಕೆ ಹೀಗೆ ಉದ್ಯೋಗ ಕೌಶಲಪೂರ್ಣ ತರಬೇತಿ ನೀಡಲಾಗುತ್ತಿತ್ತು.
ಇದೀಗ ಅಡುಗೆ ತರಬೇತಿ ಕೋರ್ಸನ್ನು ಕಾರಾಗೃಹ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯ ಎನ್ನುವ ಎನ್ ಜಿ ಒ ಸಂಘಟನೆ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದೆ.
ಇತ್ತೀಚಿಗಷ್ಟೆ ಈ ತರಬೇತಿ ಕಾರ್ಯಾಗಾರವನ್ನು ಸೆಲಬ್ರಿಟಿ ಬಾಣಸಿಗ ಸುರೇಶ್ ಪಿಳ್ಳೈ ಅವರು ಉದ್ಘಾಟಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿಯೇ ಅವರು ೫೦ ಮಂದಿ ಕೈಇಗಳಿಗೆ ಅಡುಗೆ ತರಬೇತಿ ನೀಡಿದ್ದರು.
ಜೈಲಿನಿಂದ ಬಿಡುಗಡೆಯಾದ ನಂತರ ಹಲವು ಕೈದಿಗಳು ತಾವು ಕುಟುಂಬಕ್ಕೆ ಭಾರ ಎನ್ನುವ ಅನುಭವಕ್ಕೆ ತುತ್ತಾಗಿದ್ದರು. ಇದನ್ನು ಮನಗಂಡು ಎನ್ ಜಿ ಒ ಈ ತರಬೇತಿ ಹಮ್ಮಿಕೊಂಡಿದೆ. ಪ್ರತಿಭಾವಂತ ಬಾಣಸಿಗರಿಗೆ ಆಹಾರೋದ್ಯಮದಲ್ಲಿ ಬೇಡಿಕೆ ಇದೆ ಮತ್ತು ಹೆಚ್ಚಿನ ಸಂಪಾದನೆಯನ್ನೂ ಮಾಡಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.