'ಹಿಂದೆಲ್ಲಾ ಕಲೆ, ಸಾಹಿತ್ಯ, ಸಂಸ್ಕೃತಿಗಳೆಂದರೆ ಬದುಕನ್ನು ಹಿತವಾಗಿ ಪ್ರಚೋದಿಸುವ, ಪ್ರೇರೇಪಿಸುವ, ಪೋಷಿಸುವ ಹಾಗೆಯೇ ಸಮಾಜವನ್ನು ಪರಿವರ್ತಿಸುವ ವಿಶಿಷ್ಟ ಸಂವೇದನಾ ವಲಯಗಳಾಗಿ ಗುರುತಾಗಿದ್ದವು. ಆದರೆ ಕಲೆ, ಕ್ರೀಡೆ, ಮಾಧ್ಯಮ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರಾಕಾರಗಳಿಂದು ಪರಿಶುದ್ಧವಾಗಿ ಉಳಿದಿಲ್ಲ.
ನಿಜ, ಸಮಾಜದ ಅಂತಃಸತ್ವಗಳಾದ ಸಾಹಿತ್ಯಿಕ-ಸಾಂಸ್ಕೃತಿಕ ಕ್ಷೇತ್ರಗಳಿಂದು ಹಣ- ಅಧಿಕಾರದ ಹಿಂದೆ ಬಿದ್ದಿವೆ. ಆತ್ಮವಂಚನೆ ಮಾಡಿಕೊಳ್ಳುತ್ತಿವೆ, ಅಪಹಾಸ್ಯಕ್ಕೀಡಾಗುತ್ತಿವೆ. ಇಂತಹ ವೈಪರೀತ್ಯಕ್ಕೆ ಕಾರಣವೂ ಸ್ಪಷ್ಟ, ಇವತ್ತಿನ ವಿಲಕ್ಷಣ ಕಾಲಘಟ್ಟದಲ್ಲಿ ಯಾರಿಗೂ ಸ್ವತಂತ್ರರಾಗಿ ಬದುಕುವುದು ಸಾಧ್ಯವಾಗುತ್ತಿಲ್ಲ. ಬದುಕಹೊರಟರೂ ಅವರವರ ಪರಿಸರ ಬಿಡುವುದಿಲ್ಲ. ಪ್ರತಿಯೊಬ್ಬರನ್ನೂ ಯಾವುದೋ ಚೌಕಟ್ಟಿನಲ್ಲಿ ಕಟ್ಟಿ, ತಮ್ಮದೇ ತಕ್ಕಡಿಯಲ್ಲಿಟ್ಟು ತೂಗುವ ಪರಿಪಾಟ ತೀರಾ ಸಾಮಾನ್ಯ ಎಂಬಂತಾಗಿದೆ. ವ್ಯಕ್ತಿಯ ಬೆಳವಣಿಗೆ, ನಡೆ-ನಿಲುವು, ಪ್ರತಿಭೆ, ಸಾಧನೆಗಳಲ್ಲದೆ ಅವನ ಮೋಸ, ದೋಷ, ದೌರ್ಬಲ್ಯಗಳನ್ನು ಮುಕ್ತವಾಗಿ ಸಮಷ್ಟಿಪ್ರಜ್ಞೆಯಲ್ಲಿ ಗ್ರಹಿಸುವ ಬದಲು ಪೂರ್ವಗ್ರಹಪೀಡಿತರಾಗಿ, ಜಾತಿ-ಧರ್ಮ, ಪಕ್ಷ-ಸಿದ್ಧಾಂತಗಳ ಕನ್ನಡಕದಲ್ಲಿ ನೋಡುವಂತಾಗಿದೆ. ಹಾಗಾಗಿ ಸತ್ಯ, ನ್ಯಾಯ, ನೀತಿಗಳೆಲ್ಲ ವೈಯಕ್ತಿಕ ನೆಲೆಯಲ್ಲಿ ಸಾಪೇಕ್ಷಗೊಂಡಿವೆ!
ಕೆಲವೆಡೆ ಅಪಾತ್ರರನ್ನೂ ತಮ್ಮವರೆಂದು ಮೆಚ್ಚುವುದಿದೆ, ಮೆರೆಸುವುದಿದೆ. ಬಹುತೇಕ ಕ್ರಿಡಾಪಟುಗಳು, ಕಲಾವಿದರದು ಕೂಡ ತಮ್ಮ ಪ್ರತಿಭೆಗೊಂದು ಸ್ಥಾನಬೆಲೆ ಗಿಟ್ಟಿಸಿಕೊಳ್ಳಲು ಎಗ್ಗಿಲ್ಲದೆ ಜಾತಿ-ಧರ್ಮ, ಪಕ್ಷ-ಸಿದ್ಧಾಂತದೊಟ್ಟಿಗೆ ಗುರುತಿಸಿಕೊಳ್ಳುವುದು ಅಥವಾ ತಮ್ಮ ಅಸಮರ್ಥತೆ, ಅಕ್ರಮಗಳನ್ನು ಮರೆಮಾಚುವ ಪರದೆಯನ್ನಾಗಿಯೂ ಅದನ್ನು ಬಳಸಿಕೊಳ್ಳುವ ಹಪಹಪಿ.
ಇಂಥದ್ದಕ್ಕೆಲ್ಲಾ ಅಪವಾದವೆಂಬಂತೆ ಡಾ. ರಾಜ್‍ಕುಮಾರ್ ಬದುಕಿನುದ್ದಕ್ಕೂ ಘನ ವ್ಯಕ್ತಿತ್ವವನ್ನು ಜೀವಿಸಿದ್ದರು. ಅತೀವ ಒತ್ತಡವಿದ್ದಾಗಲೂ ಅವರೆಂದಿಗೂ ರಾಜಕಾರಣದೆಡೆಗೆ ತಿರುಗಿಯೂ ನೋಡದೆ ಕೇವಲ ಕಲೆಯನ್ನಷ್ಟೇ ಆರಾಧಿಸಿದರು, ಉಸಿರಾಡಿದರು. ನೆರೆಯ ತಮಿಳುನಾಡು, ಆಂದ್ರಪ್ರದೇಶದಲ್ಲಿ ತಮ್ಮ ವಾರಿಗೆಯ ಎಂಜಿಆರ್, ಎನ್‍ಟಿಆರ್‌ರಂತಹ ಸಿನಿನಟರು ರಾಜಕೀಯ, ಅಧಿಕಾರದ ಬೆನ್ನುಹತ್ತಿ ಹೊರಟರೆ ಡಾ. ರಾಜ್ ಕೆಸರು ಮೈಗಂಟಿಸಿಕೊಳ್ಳದ ಕಮಲದಂತೆ ಅಪೂರ್ವ ಮಾದರಿಯಾಗಿ ಉಳಿದುಬಿಟ್ಟರು. ಅವರ ಸಿನಿಮಾಗಳಲ್ಲಿ ಪ್ರೇಕ್ಷಕರಿಗೆ ಅವರೊಬ್ಬ ಪರಕಾಯ ಪ್ರವೇಶಿಸಿದ ಪಾತ್ರಧಾರಿಯಾಗಿ ಕಾಣುತ್ತಿದ್ದರೇ ವಿನಾ ಜಾತಿ-ಧರ್ಮ, ಪಕ್ಷ-ಪಂಗಡಗಳ ಯಾವ ನೆನಪನ್ನೂ ತಾರದೆ ಕಲಾರಸಿಕರಿಗೆ ರಸಸ್ವಾದಕ್ಕಷ್ಟೇ ಆಸ್ಪದ ನೀಡುತ್ತಿದ್ದರು.
ಹಿಂದೆಲ್ಲಾ ಜನರಿಗೆ ತಮ್ಮ ಜಾತಿ, ಧರ್ಮ ಅಥವಾ ಯಾವುದೋ ಒಂದು ರಾಜಕೀಯ ಪಕ್ಷದ ಪರವಾಗಿ ಬಹಿರಂಗವಾಗಿ ಗುರುತಿಸಿಕೊಳ್ಳಲು ಮುಜುಗರವಿರುತ್ತಿತ್ತು. ವಿಶೇಷವಾಗಿ ವಿದ್ಯಾವಂತರಿಗಂತೂ ಯಾವುದೇ ಪಕ್ಷ-ಸಿದ್ಧಾಂತಗಳೂ ಪರಿಪೂರ್ಣವಲ್ಲ ಎಂಬ ಗ್ರಹಿಕೆಯೂ ಕುಲಕಸುಬಿನ ಆಧಾರದಲ್ಲಿ ರಚನೆಗೊಂಡ ಜಾತಿಗಳ ಹುಟ್ಟು-ಬೆಳವಣಿಗೆ ಕುರಿತಾದ ಪ್ರಬುದ್ಧತೆಯೂ ಎಲ್ಲ ಧರ್ಮಗಳೂ ಶ್ರೇಷ್ಠವೆಂಬ ಪ್ರಾಥಮಿಕ ಅರಿವೂ ಇದ್ದವು. ಮತ್ತೊಂದು ಸಿದ್ಧಾಂತ, ಪಕ್ಷ, ಪಂಗಡ ಅಥವಾ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಟೀಕಿಸುವಾಗ ಕೂಡ ಸಂಯಮ-ವಿವೇಕದ ಗೆರೆಯನ್ನು ದಾಟುತ್ತಿರಲಿಲ್ಲ. ಮನುಷ್ಯಸಹಜ ಭಿನ್ನಧ್ವನಿಗಳ ಬಗೆಗೊಂದು ಸಹಿಷ್ಣುತೆ, ಗೌರವಗಳಿದ್ದವು. 'ಇದು ಒಂದು ಕೂಳ್ಗಂಬದ ಮೇಲೆ ನಿಂತ ಡೇರೆಯಲ್ಲ, ಸಾವಿರ ಕಂಬಗಳ ಮೇಲೆ ನಿಂತ ಚಪ್ಪರ...' ಎಂಬ ಬಹುತ್ವ ಭಾರತದ ಕುರಿತಾದ ಗೌರೀಶ ಕಾಯ್ಕಿಣಿಯವರ ಅರಿವಿನ ಮಾತು ಸಾಂದರ್ಭಿಕವಾದುದು.
ಇದು ಎಡಬಲ ಸಿದ್ಧಾಂತದ ಮೇಲಾಟವಿರುವ ಕಾಲಘಟ್ಟ. ಜೀವಪರವಾಗಿ, ಮನುಷ್ಯಪರವಾಗಿ ಯೋಚಿಸುವುದೇ ಕೆಲವೊಮ್ಮೆ ಕಷ್ಟಕರ ಅನಿಸುವಷ್ಟು. ನಡುಮಾರ್ಗದ ನಡಿಗೆಗೆ ಆಸ್ಪದವೇ ಕಮ್ಮಿ. ಪ್ರತಿಯೊಬ್ಬರನ್ನೂ ಒತ್ತಾಯಪೂರ್ವಕವಾಗಿಯಾದರೂ ಸಿದ್ಧಾಂತವೊಂದಕ್ಕೆ ಕಟ್ಟಿಹಾಕುವ ಪ್ರಯತ್ನವೀಗ ನಿರಂತರವಾಗಿ ಚಾಲ್ತಿಯಲ್ಲಿದೆ.
ಸುದೀರ್ಘ ಜೀವನಾನುಭವ ಮತ್ತು ಆಳ ಅಧ್ಯಯನವುಳ್ಳ ಹಿರಿಯರನೇಕರ ಅಪರಿಮಿತ ಜ್ಞಾನ-ಸೇವೆಗಳನ್ನು ಕ್ಷುಲ್ಲಕವಾಗಿ ಅರ್ಥೈಸುವಂತಹ ಉಡಾಫೆ ಧೋರಣೆಗಳಿಗೂ ಬರವಿಲ್ಲ. ಗುಣಸಂಪನ್ನರ ಸಾಂಗತ್ಯರಾಹಿತ್ಯವೂ ಇಂಥದ್ದಕ್ಕೊಂದು ಕಾರಣ. ವಿದ್ಯಾರ್ಥಿಗಳು-ಯುವಕರು ನೈಜತೆಯನ್ನು ಪರಾಮರ್ಶಿಸುವ ಪ್ರಬುದ್ಧತೆ ತೋರದೆ ಸುಳ್ಳು, ಆಧಾರರಹಿತ ಸಂದೇಶಗಳನ್ನೇ ನಂಬುತ್ತಾ, ಹರಡುತ್ತಾ ವಾಟ್ಸ್‌ಆಯಪ್ ಯೂನಿವರ್ಸಿಟಿಯ ಜ್ಞಾನವೇ ಸರ್ವೋತ್ತಮ ಎಂಬಂತೆ ವರ್ತಿಸುತ್ತಿರುವ ವಿಲಕ್ಷಣ ಮನಃಸ್ಥಿತಿ ಅಪಾಯಕಾರಿ ಅನಿಸುತ್ತದೆ.
ಒಂದು ಸಿದ್ಧಾಂತವನ್ನು ಸಂಕುಚಿತತೆಯಲ್ಲಿ ಆತುಕೊಂಡು, ಅರಿವು ತರಬಲ್ಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡು ಹೊಸ ಗಾಳಿ-ಬೆಳಕಿಗೆ ತೆರೆದುಕೊಳ್ಳದ ಅರೆಬೆಂದ ಮನಃಸ್ಥಿತಿಗಳ ಅರ್ಭಟ ಬಹಳಷ್ಟು ಅನಾಹುತಗಳನ್ನು ಸೃಷ್ಟಿಸುತ್ತಿದೆ. ಕಾಲಾಂತರದಿಂದ ಕಾಪಿಟ್ಟುಕೊಂಡು ಬಂದ ಸಾಮರಸ್ಯದ ಜೀವನಶೈಲಿಯನ್ನು ಹಾಳುಗೆಡವುತ್ತಿದೆ.
ಸಮಾಜವೀಗ ಹೊಣೆಗಾರಿಕೆಯನ್ನರಿತು, ಸ್ವಯಂನಿಯಂತ್ರಣದಲ್ಲಿ ರಾಗ-ದ್ವೇಷಗಳ ಕೊಳೆ ತೊಳೆದು ಭವಿಷ್ಯದ ಎಳೆಯ ಕುಡಿಗಳೆದುರು ಪ್ರೀತಿ, ಕರುಣೆ, ಮಾನವೀಯ ಮೌಲ್ಯಗಳಿರುವ ಸ್ವಚ್ಛ ಭಾರತವನ್ನು ಉಳಿಸಿಕೊಳ್ಳಬೇಕಿದೆ.