ನವದೆಹಲಿ: 'ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ಸೋಂಕು ಕಂಡುಬಂದು ಜ. 30ಕ್ಕೆ ಎರಡು ವರ್ಷ ಪೂರ್ಣಗೊಂಡಿದ್ದು, ಲಸಿಕೆ ಪಡೆಯುವುದು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದು ಕೊರೊನಾ ವಿರುದ್ದದ ಅತ್ಯಂತ ಪರಿಣಾಮಕಾರಿ ಅಸ್ತ್ರಗಳಾಗಿ ಉಳಿದಿವೆ' ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ದೇಶದಲ್ಲಿ 2020ರ ಜ. 30ರಂದು ಮೊದಲ ಕೋವಿಡ್ ಪ್ರಕರಣ ವರದಿಯಾಗಿತ್ತು. ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಕೇರಳದ ಯುವತಿಯು ಸೆಮಿಸ್ಟರ್ ರಜೆಗೆಂದು ಭಾರತಕ್ಕೆ ಮರಳಿದ್ದಾಗ ಆಕೆಗೆ ಕೋವಿಡ್ ದೃಢಪಟ್ಟಿತ್ತು.
ಒಟ್ಟಾರೆ ಎರಡು ವರ್ಷಗಳ ಅವಧಿಯಲ್ಲಿ ಭಾರತವು ಕೋವಿಡ್-19ರ ಮೂರು ಅಲೆಗಳು ಮತ್ತು ಏಳು ರೂಪಾಂತರಿ ತಳಿಗಳೊಂದಿಗೆ ಹೋರಾಟ ಮಾಡಿದೆ. ಈ ರೂಪಾಂತರಿ ತಳಿಗಳಲ್ಲಿ ಹಲವು ಮಾರಕವಾಗಿಯೂ ಪರಿಣಮಿಸಿವೆ. ಕೋವಿಡ್ ಮತ್ತು ಅದರ ರೂಪಾಂತರಿ ತಳಿಗಳಿಂದಾಗಿ ಭಾರತದಲ್ಲಿ ಒಟ್ಟು 4.8 ಕೋಟಿ ಪ್ರಕರಣಗಳು ವರದಿಯಾಗಿದ್ದು, 4.94 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ.
'ದೇಶದಲ್ಲಿ ಕೋವಿಡ್‌ಗೆ ಹಲವು ಚಿಕಿತ್ಸಾ ವಿಧಾನಗಳನ್ನು ಪ್ರಯತ್ನಿಸಿದರೂ, ಈ ಸಾಂಕ್ರಾಮಿಕ ರೋಗವನ್ನು ಗುಣಪಡಿಸಲು ಯಾವುದೇ ನಿರ್ಣಾಯಕ ಔಷಧವಿಲ್ಲ' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
'ಕೋವಿಡ್-19 ರೂಪಾಂತರಗಳನ್ನು ಅನುಲಕ್ಷಿಸಿ, 'ಪರೀಕ್ಷೆ- ಪತ್ತೆ ಹಚ್ಚುವಿಕೆ- ಚಿಕಿತ್ಸೆ- ಲಸಿಕೆ (ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಟ್) ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದೇ ಕೋವಿಡ್ ನಿರ್ವಹಣೆಗೆ ಉಳಿದಿರುವ ಪರೀಕ್ಷಿತ ಕಾರ್ಯತಂತ್ರವಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಹೇಳಿದ್ದಾರೆ.
ಈ ನಡುವೆ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪಾಲ್ ಅವರು ಔಷಧಿಗಳ ಅತಿಯಾದ ಬಳಕೆ ಮತ್ತು ದುರ್ಬಳಕೆಗೆ ಕಳವಳ ವ್ಯಕ್ತಪಡಿಸಲಿದ್ದು, 'ಸ್ಟಿರಾಯ್ಡ್‌ಗಳ ಬಳಕೆಯು ಕಪ್ಪುಶಿಲೀಂಧ್ರದ ಸಾಧ್ಯತೆಯನ್ನು ಹೆಚ್ಚಿಸಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತುರ್ತು ಆರೈಕೆಯ ಮಹತ್ವ ಮತ್ತು ಸರಿಯಾದ ಚಿಕಿತ್ಸೆಯು ದೊಡ್ಡ ಕಲಿಕೆಯಾಗಿದೆ' ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.
'ಭವಿಷ್ಯದಲ್ಲಿ ಏನಾಗುತ್ತದೆ ಎಂದು ಊಹಿಸಲು ಅಸಾಧ್ಯ. ನಾಲ್ಕನೇ ಅಲೆಯು ಮಾರಕವಾಗಬಹುದು ಅಥವಾ ಸಾಮೂಹಿಕ ಲಸಿಕೆಯೊಂದಿಗೆ ಕೋವಿಡ್ ಅಂತ್ಯವಾಗಬಹುದು, ಇಲ್ಲವೇ, ಕೋವಿಡ್ ಯಾವುದೇ ಸಾಮಾನ್ಯ ಜ್ವರದಂತೆ ರೂಢಿಯಾಗಬಹುದು' ಎಂದು ಫರಿದಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ (ರೆಸ್ಪಿರೇಟರಿ ಮೆಡಿಸಿನ್) ನಿರ್ದೇಶಕ ಡಾ.ಮಾನವ್ ಮಂಚಂದ ಅಭಿಪ್ರಾಯಪಡುತ್ತಾರೆ.
ಮೂರನೇ ಅಲೆ ವಿರುದ್ಧ ಯಶಸ್ವಿ ಹೋರಾಟ: ಪ್ರಧಾನಿ ಮೋದಿ
'ಕೋವಿಡ್‌ನ ಮೂರನೇ ಅಲೆ ವಿರುದ್ಧ ದೇಶವು ಭಾರಿ ಯಶಸ್ಸಿನೊಂದಿಗೆ ಹೋರಾಟ ನಡೆಸುತ್ತಿದೆ. ದೇಶಿ ನಿರ್ಮಿತ ಕೋವಿಡ್ ಲಸಿಕೆಯು ನಮ್ಮ ಶಕ್ತಿಯಾಗಿದೆ' ಎಂದು ವರ್ಷದ ಮೊದಲ 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ದೇಶದಲ್ಲಿ ಸುಮಾರು ನಾಲ್ಕೂವರೆ ಕೋಟಿ ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 15ರಿಂದ 18 ವರ್ಷದೊಳಗಿನ ಸುಮಾರು ಶೇ 60ರಷ್ಟು ಮಕ್ಕಳು ಕೋವಿಡ್ ಲಸಿಕೆ ಪಡೆದಿದ್ದಾರೆ. ಇದರಿಂದ ಯುವ ಜನಾಂಗಕ್ಕೆ ಕೋವಿಡ್‌ನಿಂದ ರಕ್ಷಣೆ ಸಿಗುವುದಲ್ಲದೆ, ಕಲಿಕೆ ಮುಂದುವರಿಸಲು ನೆರವಾಗಲಿದೆ' ಎಂದೂ ತಿಳಿಸಿದ್ದಾರೆ.
ಶೇ 75ರಷ್ಟು ವಯಸ್ಕರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವುದಕ್ಕಾಗಿ ದೇಶದ ಜನತೆಯನ್ನು ಮೋದಿ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ಬಾಲಿವುಡ್ ನಟಿ ಕಾಜೋಲ್‌ಗೆ ಕೋವಿಡ್ ದೃಢ
ಮುಂಬೈ: ಬಾಲಿವುಡ್ ನಟಿ ಕಾಜೋಲ್ ಅವರಿಗೆ ಭಾನುವಾರ ಕೋವಿಡ್ ದೃಢಪಟ್ಟಿದೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪುತ್ರಿಯ ಜತೆಗಿರುವ ತಮ್ಮ ಚಿತ್ರವನ್ನು ಹಂಚಿಕೊಂಡಿರುವ ಅವರು, 'ನನಗೆ ಕೋವಿಡ್ ದೃಢಪಟ್ಟಿದೆ. ಶೀತದಿಂದಾಗಿ ಕಾಲ್ಪನಿಕ ರುಡಾಲ್ಫ್ ಜಿಂಕೆಯ ಮೂಗಿನಂತೆ ಕೆಂಪಾಗಿರುವ ನನ್ನ ಮೂಗನ್ನು ಇತರರಿಗೆ ತೋರಿಸಲು ತೀವ್ರ ಮುಜುಗರವಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.