HEALTH TIPS

ಸಂಕಷ್ಟದಲ್ಲಿ ಪದ್ಮನಾಭಸ್ವಾಮಿ ದೇಗುಲ: ನೆರವಿಗಾಗಿ ಸರ್ಕಾರದ ಮೊರೆಹೋದ ರಾಜಮನೆತನ

            ತಿರುವನಂತಪುರ: ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ಪದ್ಮನಾಭಸ್ವಾಮಿ ದೇಗುಲದ ಆಡಳಿತ ಮಂಡಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಾಲದ ರೂಪದಲ್ಲಿ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

          ಕೋವಿಡ್‌ ಸಾಂಕ್ರಾಮಿಕದಿಂದಾಗಿ ದೇವಸ್ಥಾನದ ಆದಾಯದಲ್ಲಿ ಕುಸಿತ ಕಂಡುಬಂದಿದೆ.

ಸಾಲದ ರೂಪದಲ್ಲಿ ರಾಜ್ಯ ಸರ್ಕಾರದಿಂದ ಈಗಾಗಲೇ ₹2 ಕೋಟಿ ಮಂಜೂರು ಮಾಡಲಾಗಿದೆ. ಇದನ್ನು ಒಂದು ವರ್ಷದೊಳಗೆ ಮರುಪಾವತಿಸುವಂತೆ ಷರತ್ತು ವಿಧಿಸಲಾಗಿದೆ' ಎಂದು ಟ್ರಸ್ಟ್‌ನ ಉನ್ನತ ಮೂಲಗಳು ತಿಳಿಸಿವೆ.

            'ಕೋವಿಡ್‌ ಕಾರಣದಿಂದ ದೇವಾಲಯ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ದೇವಾಲಯದಲ್ಲಿ ಸುಮಾರು 200 ಖಾಯಂ ಮತ್ತು ತಾತ್ಕಾಲಿಕ ನೌಕರರು ಕೆಲಸ ಮಾಡುತ್ತಿದ್ದು, ಅವರಿಗೆ ಮಾಸಿಕ ₹ 1 ಕೋಟಿಗೂ ಹೆಚ್ಚು ವೇತನ ನೀಡಬೇಕಾಗಿದೆ. ಆದಾಯ ಕಡಿಮೆ ಆಗಿರುವುದರಿಂದ ನೌಕರರಿಗೆ ಸೂಕ್ತ ಸಮಯಕ್ಕೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ' ಎಂದು ಹೆಸರು ಹೇಳಲು ಇಚ್ಚಿಸದ ಟ್ರಸ್ಟ್‌ನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

          ತಿರುವಾಂಕೂರು ಪದ್ಮನಾಭಸ್ವಾಮಿ ದೇವಾಲಯದ ಆಡಳಿತದ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು, ದೇವಾಲಯದ ಆಡಳಿತವನ್ನು ರಾಜ್ಯ ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು 2011ರಲ್ಲಿ ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.

          2020ರಲ್ಲಿ ಕೇರಳ ಹೈಕೋರ್ಟ್‌ನ ಆದೇಶದ ವಿರುದ್ಧ ರಾಜಮನೆತನದವರು ಸಲ್ಲಿಸಿದ್ದ ಅರ್ಜಿ ಮತ್ತು ಇನ್ನೂ ಹಲವು ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠವು ಈ ತೀರ್ಪು ನೀಡಿತ್ತು.

          ಸದ್ಯ ಮಹಾರಾಜ ಶ್ರೀ ಮೂಲಂ ತಿರುನಾಳ್ ರಾಮವರ್ಮ ಅವರು ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ.

ಎಷ್ಟು ಪುರಾಣ ಪ್ರಸಿದ್ಧವೋ ಅಷ್ಟೇ ನಿಗೂಢ!

           ಕೇರಳದ ತಿರುವನಂತಪುರದಲ್ಲಿರುವ ಅನಂತಪದ್ಮನಾಭಸ್ವಾಮಿ ದೇವಸ್ಥಾನವು ಭಾರತದ ಅತ್ಯಂತ ಶ್ರೀಮಂತ ದೇಗುಲ ಎನಿಸಿದೆ. ಇಲ್ಲಿನ ನೆಲಮಾಳಿಗೆಯಲ್ಲಿ ಇರುವ ಆರು ಖಜಾನೆ ಕೋಣೆಗಳ ಪೈಕಿ ಐದರಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾದ ಬಳಿಕ ಈ ದೇವಸ್ಥಾನವು ಇಡೀ ದೇಶದ ಗಮನ ಸೆಳೆದಿತ್ತು. 'ಬಿ' ಕೋಣೆಯನ್ನು ಇನ್ನೂ ತೆರೆಯಲಾಗಿಲ್ಲ. ಇಲ್ಲಿ ಅಪಾರ ಚಿನ್ನಾಭರಣ ಇದೆ ಎಂದು ಊಹಿಸಲಾಗಿದೆ.

          ತಿರುವನಂತಪುರಕ್ಕೆ ಆ ಹೆಸರು ಬರಲು ಅನಂತ ಪದ್ಮನಾಭಸ್ವಾಮಿಯೇ ಕಾರಣವಂತೆ. ವಿಷ್ಣುವಿನ ಸ್ವರೂಪವಾದ ಅನಂತ ಪದ್ಮನಾಭಸ್ವಾಮಿಯ ಬೃಹತ್ ಆಕಾರವನ್ನು ಇಲ್ಲಿ ಕಾಣಬಹುದು. ಪ್ರತಿಮೆಯು ಶಯನಾವಸ್ಥೆಯಲ್ಲಿ ಇರುವುದರಿಂದ ಅನಂತ ಶಯನ ಎಂದೂ ಕರೆಯಲಾಗಿದೆ. ತಲೆಯ ಮೇಲೆ ಐದು ಹೆಡೆಗಳ ಸರ್ಪವನ್ನು ಕಾಣಬಹುದು. ಗರ್ಭಗುಡಿಗೆ ಮೂರು ದ್ವಾರಗಳಿವೆ. ಆ ಮೂರೂ ದ್ವಾರಗಳ ಮೂಲಕವಷ್ಟೇ ದೇವರ ಪೂರ್ಣ ದರ್ಶನ ಪಡೆಯಲು ಸಾಧ್ಯ.

           ಪದ್ಮನಾಭನ ಜೊತೆಗೆ ಲಕ್ಷ್ಮಿ (ಶ್ರೀದೇವಿ), ಭೂದೇವಿ ಇದ್ದಾರೆ. ಅನಂತ ಪದ್ಮನಾಭ ವಿಗ್ರಹದ ಬಲಗೈ ಶಿವಲಿಂಗದ ಮೇಲೆ ಚಾಚಿಕೊಂಡಿರುವುದು ಇಲ್ಲಿನ ವಿಶೇಷತೆಗಳಲ್ಲೊಂದು. ಮಾರ್ಕಂಡೇಯ ಮುನಿ, ಗರುಡ, ನಾರದ, ಸೂರ್ಯ, ಚಂದ್ರ, ಸಪ್ತರ್ಷಿ ಮೊದಲಾದ ವಿಗ್ರಹಗಳು ಇಲ್ಲಿವೆ. ಮುಖ್ಯವಿಗ್ರಹವನ್ನು ನೇಪಾಳದ ಗಂಡಕಿ ನದಿಯಲ್ಲಿ ಸಿಕ್ಕ 1,20,008 ಸಾಲಿಗ್ರಾಮಗಳನ್ನು ಬಳಸಿ ನಿರ್ಮಿಸಲಾಗಿದ್ದು, ವಿಗ್ರಹದ ಮೇಲೆ ಕಟುಸರ್ಕರ ಯೋಗಂ ಎಂಬ ಆಯುರ್ವೇದದ ಲೇಪನವನ್ನು ಮಾಡಲಾಗಿದೆ ಎಂಬ ಪ್ರತೀತಿ ಇದೆ.

             ಬ್ರಹ್ಮ ಪುರಾಣ, ಮತ್ಸ್ಯ ಪುರಾಣ, ವರಾಹ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ವಾಯು ಪುರಾಣ, ಭಗವತಿ ಪುರಾಣ ಮತ್ತು ಮಹಾಭಾರತದಲ್ಲೂ ದೇವಸ್ಥಾನದ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries