ಬದಿಯಡ್ಕ: ಖಾಸಗಿ ಶಿಕ್ಷಣ ವಲಯದ ಎಲ್ಲ ನೇಮಕಾತಿಗಳನ್ನು ಪಿಎಸ್‍ಸಿಗೆ ವಹಿಸಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯ ನಷ್ಟವನ್ನು ವಿಶೇಷ ನೇಮಕಾತಿ ಮೂಲಕ ತುಂಬಿಕೊಡುವಂತೆ ಅಖಿಲ ಭಾರತ ಎಸ್‍ಸಿಎಸ್‍ಟಿ ಸಂಘಟನೆಗಳ ಒಕ್ಕೂಟದ ಕಾಸರಗೋಡು ಜಿಲ್ಲಾ ಸಮ್ಮೇಳನ ಸರ್ಕಾರವನ್ನು ಆಗ್ರಹಿಸಿದೆ. ವೇತನಗಳು, ಭತ್ಯೆಗಳು, ಪಿಂಚಣಿ ಪ್ರಯೋಜನಗಳು ಮತ್ತು ನಿರ್ವಹಣಾ ಅನುದಾನಗಳ ವೆಚ್ಚವನ್ನು ಸರ್ಕಾರದ ಬೊಕ್ಕಸದಿಂದ ಭರಿಸಲಾಗುತ್ತದ್ದರೂ ರಾಜ್ಯದ ಶಿಕ್ಷಣ ಕ್ಷೇತ್ರದ 80 ಶೇ. ಉದ್ಯೋಗವು ಖಾಸಗಿ ವ್ಯವಸ್ಥಾಪಕರ ಮೂಲಕ ನೇಮಕಾತಿ ನಡೆಯುತ್ತದೆ. ಅಂತಹ ಸಂಸ್ಥೆಗಳು ಸಾರ್ವಜನಿಕ ಸಂಸ್ಥೆಗಳು ಎಂದು ಕೇರಳ ಸರ್ಕಾರವೇ ಸುಪ್ರೀಂ ಕೋರ್ಟ್‍ನಲ್ಲಿ ಅಫಿಡವಿಟ್ ನೀಡಿದೆ. ಹಿಂಬಾಗಿಲ ನೇಮಕಾತಿ ಮತ್ತು ಗುತ್ತಿಗೆ ನೇಮಕಾತಿ ಮೂಲಕ ಪರಿಶಿಷ್ಟ ಜಾತಿಯವರಿಗೆ ಹತ್ತಾರು ಉದ್ಯೋಗಗಳು ನಷ್ಟವಾಗುತ್ತಿದೆ. ಸಚಿವರ ವೈಯಕ್ತಿಕ ಸಿಬ್ಬಂದಿಯಲ್ಲೂ ಅವರಿಗೆ ಪ್ರಾತಿನಿಧ್ಯವಿಲ್ಲ. ಎಲ್ಲ ನೇಮಕಾತಿಗಳನ್ನು ಪಿ.ಎಸ್.ಸಿ.ಮುಖಾಂತರವೇ ನಡೆಸಬೇಕು ಎಂದು ಆಗ್ರಹಿಸಿ ಕಾಸರಗೋಡಿನಿಂದ ತಿರುವನಂತಪುರಕ್ಕೆ `ಯುವ ನಡಿಗೆ'ಯನ್ನು ಆಯೋಜಿಸಲು ಸಭೆನಿರ್ಧರಿಸಿತು. ಎಡರಂಗ ಸರ್ಕಾರದ ಅವಧಿಯಲ್ಲಿ ಈ ವಿಭಾಗದ ವಿರುದ್ಧ ಶೋಷಣೆ ಮತ್ತು ತಾರತಮ್ಯದ ಬಗ್ಗೆ ಸಭೆ ಕಳವಳ ವ್ಯಕ್ತಪಡಿಸಿತು. ಲೈಫ್ ಮಿಷನ್ ಯೋಜನೆಗಳ ಅಸಮರ್ಪಕತೆಯನ್ನು ನಿವಾರಿಸಬೇಕು ಮತ್ತು ಫ್ಲಾಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಸಭೆ ಆಗ್ರಹಿಸಿದೆ.
ಜಿಲ್ಲಾ ಸಮ್ಮೇಳನವನ್ನು ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವಿ. ನಟೇಶನ್ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾಧ್ಯಕ್ಷ ರಾಮಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ಬಿ. ಮಾತನಾಡಿದರು. ಮಾಧ್ಯಮ ಸಂಚಾಲಕ ಹಾಗೂ ಸಹ ಕಾರ್ಯದರ್ಶಿ ಎನ್.ಮುರಳಿ ಆಶಯ ಭಾಷಣ ಮಾಡಿದರು. ರಾಜ್ಯ ಖಜಾಂಚಿ ವಿ.ಪಿ. ಸ್ವಾಮಿನಾಥನ್, ಎನ್‍ಎಸ್‍ವೈಎಫ್ ರಾಜ್ಯಾಧ್ಯಕ್ಷ ವಯಲಾರ್ ಧನಂಜಯನ್, ಪ್ರಧಾನ ಕಾರ್ಯದರ್ಶಿ ಶ್ರೀಜಾ ಸುನಿಲ್, ಜಿಲ್ಲಾ ಸಂಚಾಲಕ ಹಾಗೂ ರಾಜ್ಯ ಸಮಿತಿ ಸದಸ್ಯ ಬಾಬು ಎನ್ ನೆಲ್ಲಿಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಪೆರಿಯಡ್ಕ, ಜನಪ್ರತಿನಿಧಿಗಳಾದ ಬಾಬು ಕುಳೂರು, ಶಂಕರ ಡಿ., ಉದಯ ಮಧೂರು, ವಿವಿಧ ಸಮುದಾಯ ಸಂಘಟನೆಗಳ ಮುಖಂಡರಾದ ಆನಂದ ಮವ್ವಾರು, ಕೆ.ಕೆ.ಸ್ವಾಮಿಕೃಪಾ, ರಾಧಮ್ಮ, ರೇಶ್ಮಾ, ಸಂಜೀವ ಪುಳ್ಕೂರು, ಪೊನ್ನಪ್ಪನ್, ಮಹೇಶ್ ಕೆ.ಕೆ.ಪುರಂ, ಗಿರಿಜಾ ತಾರಾನಾಥ ಕುಂಬಳೆ, ಅಂಗಾರ ಅಜಕ್ಕೋಡು, ವಸಂತ ಅಜಕ್ಕೋಡು ಶುಭಕೋರಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಗೀತಾ ಶಶಿ ಸ್ವಾಗತಿಸಿ, ಸುರೇಶ್ ಎ. ವಂದಿಸಿದರು.