ನವದೆಹಲಿ: ದೇಶಾದ್ಯಂತ ಇಂದಿನಿಂದ ಮುನ್ನೆಚ್ಚರಿಕೆಯ ಕೋವಿಡ್ ಲಸಿಕೆ ಡೋಸ್ ನೀಡಿಕೆ ಅಭಿಯಾನ ಆರಂಭಗೊಳ್ಳಲಿದೆ. ಆರೋಗ್ಯ ಸಿಬ್ಬಂದಿ, ಕೋವಿಡ್ ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ವೃದ್ದರಿಗೆ ಮುನ್ನೆಚ್ಚರಿಕೆಯ ಡೋಸ್ ನೀಡಿಕೆ ಆರಂಭವಾಗಿದೆ.
ಕಳೆದ ಶುಕ್ರವಾರದಿಂದಲೇ ಕೋವಿನ್ ವೆಬ್ ಸೈಟ್ ನಲ್ಲಿ ನೋಂದಣಿ ಕೂಡಾ ಆರಂಭವಾಗಿದೆ. ಡಿಸೆಂಬರ್ 25 ರಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, 15-18 ವರ್ಷದ ಕಿರಿಯರು, ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲು ಕ್ರಮ ಕೈಗೊಂಡಿರುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇಂದಿನಿಂದ ಬೂಸ್ಟರ್ ಡೋಸ್ ಲಸಿಕೆ ನೀಡಿಕೆಗೆ ಚಾಲನೆ ಸಿಕ್ಕಿದೆ.
ರೂಪಾಂತರಿ ಒಮಿಕ್ರಾನ್ ತಡೆಯಲು ಹಲವು ತಜ್ಞರು ಬೂಸ್ಟರ್ ಡೋಸ್ಗೆ ಶಿಫಾರಸು ಮಾಡಿದ್ದರು. ಜನವರಿ 10 ರಿಂದ ಅಂದರೆ ಇಂದಿನಿಂದ ರಾಜ್ಯದಲ್ಲೂ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತದೆ.
ಕೋವಿನ್ ಪೋರ್ಟಲ್ ನಲ್ಲಿ ನೋಂದಾಯಿಸಿದಂತೆ ಎರಡು ಡೋಸ್ ಪಡೆದಿರಬೇಕು. ಎರಡನೇ ಡೋಸ್ ಪಡೆದು 9 ತಿಂಗಳು (39 ವಾರಗಳಾಗಿರಬೇಕು)ಆಗಿರಬೇಕು.ಎರಡು ಡೋಸ್ ಪಡೆದಿರುವ ಬಗ್ಗೆ ಮಾಹಿತಿ ಒದಗಿಸಬೇಕು.ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರು ಮೂರನೇ ಡೋಸ್ ಕೋವಿಶೀಲ್ಡ್ ಅನ್ನೇ ಪಡೆಯಬೇಕು.ಕೋವ್ಯಾಕ್ಸಿನ್ ಪಡೆದವರು ಮೂರನೇ ಡೋಸ್ಗೆ ಕೋವ್ಯಾಕ್ಸಿನ್ ಅನ್ನೇ ಪಡೆಯಬೇಕು.
ಎಲ್ಲಾ ಸರ್ಕಾರಿ ಲಸಿಕಾಕರಣ ಕೇಂದ್ರಗಳಲ್ಲಿ ಲಭ್ಯ.ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯ.ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಿಗಲಿದೆ.