ನವದೆಹಲಿ: ದೇಶದ 200 ರೈಲು ನಿಲ್ದಾಣಗಳಲ್ಲಿ ಮೊಬೈಲ್ ಫೋನ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿ, ಆಧಾರ್ ಕಾರ್ಡ್ ಸಂಬಂಧಿತ ಸೇವೆಗಳು, ಪ್ಯಾನ್ ಕಾರ್ಡ್ ಅರ್ಜಿ, ತೆರಿಗೆ ಪಾವತಿ ಇತ್ಯಾದಿ ಸೇವೆಗಳು ಶೀಘ್ರದಲ್ಲೇ ಪ್ರಯಾಣಿಕರಿಗೆ ಲಭ್ಯವಿರುತ್ತವೆ.
ಈ ಸೇವೆಗಳನ್ನು ಬಳಸಿಕೊಂಡು, ರೈಲು, ಬಸ್, ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಬ್ಯಾಂಕಿಂಗ್ , ವಿಮೆಯಂತಹ ದೈನಂದಿನ ಅಗತ್ಯಗಳಿಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಇನ್ನೂ ಮುಂದೆ ರೈಲ್ವೆ ನಿಲ್ದಾಣಗಳಲ್ಲಿ ಸಾಮಾನ್ಯ ಸೇವಾ ಕೇಂದ್ರ (CSC) ಕಿಯೋಸ್ಕ್‌ಗಳ ಮೂಲಕ ಒದಗಿಸಲಾಗುತ್ತದೆ.
ಇವುಗಳಿಗೆ “ರೈಲ್ ವೈರ್ ಸಾಥಿ ಕಿಯೋಸ್ಕ್” ಎಂದು ರೈಲ್ ಟೆಕ್ ನಾಮಕರಣ ಮಾಡಿದೆ. ಈ ಕಿಯೋಸ್ಕ್ ಗಳು ದೇಶದಲ್ಲಿ ಪ್ರಾಯೋಗಿಕವಾಗಿ ವಾರಣಾಸಿ ನಗರ, ಪ್ರಯಾಗ್‌ರಾಜ್ ಸಿಟಿ ರೈಲು ನಿಲ್ದಾಣಗಳಲ್ಲಿ ಮೊದಲ ಹಂತದಲ್ಲಿ ಪ್ರಾರಂಭವಾಗಲಿದೆ. ಹಂತ ಹಂತವಾಗಿ ಗ್ರಾಮೀಣ ಪ್ರದೇಶದ 200 ರೈಲು ನಿಲ್ದಾಣಗಳಿಗೆ ಕಿಯೋಸ್ಕ್ ಸೇವೆ ವಿಸ್ತರಿಸಲಾಗುತ್ತದೆ. ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿ 44, ಪೂರ್ವ ಕರಾವಳಿ ರೈಲ್ವೆಯಲ್ಲಿ 13, ಉತ್ತರ ಗಡಿ ರೈಲ್ವೆಯಲ್ಲಿ 20, ಪೂರ್ವ ಮಧ್ಯ ರೈಲ್ವೆಯಲ್ಲಿ 13, ಪಶ್ಚಿಮ ರೈಲ್ವೆಯಲ್ಲಿ 15, ಉತ್ತರ ರೈಲ್ವೆಯಲ್ಲಿ 25, ಪಶ್ಚಿಮ ಮಧ್ಯದಲ್ಲಿ 12 ಈಶಾನ್ಯ ರೈಲ್ವೆಯಲ್ಲಿ 56 ಕಿಯೋಸ್ಕ್ ಸ್ಥಾಪನೆಯಾಗಲಿದೆ.
ಹೊಸ ಕಿಯೋಸ್ಕ್‌ಗಳನ್ನು ಸಿ ಎಸ್ ಸಿ ಇ-ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಜಂಟಿ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುವುದು ಎಂದು ರೈಲ್ ಟೆಕ್ ತಿಳಿಸಿದೆ. ಭಾರತೀಯ ರೈಲ್ವೇ, ರೈಲ್ವೇ ಸಚಿವಾಲಯ, ಕೇಂದ್ರ ಸರ್ಕಾರ ಜಂಟಿಯಾಗಿ ರೈಲ್ ಟೆಕ್ ಅನ್ನು ಸ್ಥಾಪಿಸಿವೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಸೇವೆ ಕಲ್ಪಿಸಲು ಕಿಯೋಸ್ಕ್‌ಗಳನ್ನು ತರಯಲಾಗುತ್ತಿದೆ ಎಂದು ರೈಲ್‌ಟೆಕ್ ಸಿ ಎಂ ಡಿ ಪುನೀತ್ ಚಾವ್ಲಾ ಹೇಳಿದ್ದಾರೆ.