ನವದೆಹಲಿ :ಭಾರತೀಯರಿಗೆ ಸಂಬಂಧಿಸಿದಂತೆ ಜಗತ್ತಿನ ವಿವಿಧೆಡೆ ಇರುವ ಸುಮಾರು 18 ಸಂಘಟನೆಗಳು, ಇಂದು ಭಾರತ ತನ್ನ 73ನೇ ಗಣರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಜಂಟಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿ, ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದುದಕ್ಕೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಂತಹ ಕಠಿಣ ಕಾಯಿದೆ ಹೇರಲ್ಪಟ್ಟ ವಿದ್ಯಾರ್ಥಿ ನಾಯಕರು ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದೆ.
ಪೌರತ್ವ ತಿದ್ದುಪಡಿ ಕಾಯಿದೆ ಹೋರಾಟದಲ್ಲಿ ಭಾಗಿಯಾಗಿ ಯುಎಪಿಎ ಪ್ರಕರಣ ಎದುರಿಸುತ್ತಿರುವ ಶರ್ಜೀಲ್ ಇಮಾಮ್, ಇಶ್ರತ್ ಜಹಾನ್, ಖಾಲಿದ್ ಸೈಫಿ, ತಾಹಿರ್ ಹುಸೈನ್. ಸಲೀಂ ಮಲಿಕ್, ಮೊಮ್ಮದ್ ಸಲೀಂ ಖಾನ್, ಉಮರ್ ಖಾಲಿದ್, ಸಫೂರಾ ಝರ್ಗರ್, ಮೊಹಮ್ಮದ್ ಫೈಝಾನ್ ಖಾನ್, ಆಸಿಫ್ ಇಕ್ಬಾಲ್ ತನ್ಹಾ, ನಟಾಶ ನರ್ವಾಲ್, ದೇವಾಂಗನ ಕಲಿಟ, ಶಿಫಾ ಉರ್ ರೆಹಮಾನ್ ಸಹಿತ 18 ಮಂದಿಯ ವಿರುದ್ಧದ ಪ್ರಕರಣ ಕೈಬಿಡಬೇಕು, ಈ 18 ಮಂದಿಯಲ್ಲಿ 13 ಮಂದಿ, ಎಲ್ಲಾ ಮುಸ್ಲಿಮರು, ಕಳೆದೊಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾರೆ,'' ಎಂದು ಹೇಳಿಕೆ ತಿಳಿಸಿದೆ.
ಈ ಹೇಳಿಕೆಗೆ ಸಹಿ ಹಾಕಿದ ಸಂಘಟನೆಗಳ ಪೈಕಿ ಇಂಟರ್‍ನ್ಯಾಷನಲ್ ಸಾಲಿಡಾರಿಟಿ ಫಾರ್ ಅಕಾಡೆಮಿಕ್ ಫ್ರೀಡಂ ಇನ್ ಇಂಡಿಯಾ, ಪೀಪಲ್ ಅಗೇನ್ಸ್ಟ್ ಅಪಾರ್ಥೇಡ್ ಎಂಡ್ ಫ್ಯಾಸಿಸಂ, ಹಿಂದೂಸ್ ಫಾರ್ ಹ್ಯೂನ್ ರೈಟ್, ಇಂಡಿಯಾ ಸಾಲಿಡಾರಿಟಿ ಜರ್ಮನಿ, ಸ್ಕಾಟಿಶ್ ಇಂಡಿಯನ್ಸ್ ಫಾರ್ ಜಸ್ಟಿಸ್, ಜಸ್ಟಿಸ್ ಫಾರ್ ಆಲ್, ಕೆನಡಾ ಇವುಗಳು ಸೇರಿವೆ.