ಉಪ್ಪಳ: ವಿಟ್ಲದಲ್ಲಿ ಇತ್ತೀಚೆಗೆ ಕೊರಗಜ್ಜ ದೈವದ ವೇಶ ಧರಿಸಿ ಅವಮಾನಗೈದ ಘಟನೆಯ ಆರೋಪಿ, ಮಧುಮಗ ಉಪ್ಪಳ ಬೇಕೂರು ನಿವಾಸಿಯ ಮನೆ ಮೇಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ತಂಡವೊಂದು ದಾಳಿ ನಡೆಸಿದ ಘಟನೆ ನಡೆದಿದೆ.
ಬೇಕೂರು ಅಗರ್ತಿಮೂಲೆಯ ವರನ ಮನೆ ಮೇಲೆ ಸೋಮವಾರ ಮುಂಜಾನೆ ಬೈಕ್ ನಲ್ಲಿ ಆಗಮಿಸಿದ ಇಬ್ಬರ ತಂಡ ಕೃತ್ಯವೆಸಗಿದೆ ಎಮದು ಸಂಶಯಿಸಲಾಗಿದೆ. ತಂಡ ಮನೆಯ ಕಿಟಕಿ ಗಾಜುಗಳನ್ನು ಪುಡಿಗಟ್ಟಿದೆ. ಜೊತೆಗೆ ಮನೆಯ ಆವರಣ ಗೋಡೆಗೆ ಕಾವಿ ಬಳಿದಿರುವುದೂ ಕಂಡುಬಂದಿದೆ. ಕಿಟಕಿ ಗಾಜು ಮುರಿದು ಬೀಳುವ ಶಬ್ದ ಕೇಳಿ ಮನೆಯಲ್ಲಿದ್ದವರು ಬೊಬ್ಬಿರಿದಿದ್ದು, ಇವರ ಬೊಬ್ಬೆಗೆ ಬಂದ ಆಗಂತುಕರು ಬೈಕನ್ನೇರಿ ಪರಾರಿಯಾದರೆಂದು ತಿಳಿದುಬಂದಿದೆ. ಪೋಲೀಸರಿಗೆ ದೂರು ನೀಡಲಾಗಿದ್ದು, ಅಪರಿಚಿತರನ್ನು ಪತ್ತೆಹಚ್ಚಲಾಗಿಲ್ಲ. ಕುಂಬಳೆ ಠಾಣಾಧಿಕಾರಿ ವಿ.ಪ್ರಮೋದ್ ಅವರ ನೇತೃತ್ವದಲ್ಲಿ ಪೋಲೀಸರ ತಂಡ ತನಿಖೆಯಲ್ಲಿ ತೊಡಗಿಸಿಕೊಂಡಿದೆ. ಮನೆ ಪರಿಸರ ಹಾಗೂ ಬೇಕೂರಿನಲ್ಲಿ ಪೋಲೀಸ್ ಕಾವಲು ಏರ್ಪಡಿಸಲಾಗಿದೆ.
ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ವಿಟ್ಲದಿಂದ ಬೇಕೂರು ನಿವಾಸಿ ಯುವಕ ವಿವಾಹಿತನಾಗಿದ್ದ. ವಿವಾಹ ಸಮಾರಂಭದಂದು ವರ ಕೊರಗಜ್ಜನ ವೇಶ ಧರಿಸಿ ಕುಣಿದಿದ್ದು, ಬಳಿಕ ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಒಳಗಾಯಿತು. ಘಟನೆಯ ಸಂಬಂಧ ವಿಟ್ಲ ಪೋಲೀಸರು ವರನ ಸಹಿತ 25 ಮಂದಿಯ ವಿರುದ್ದ ಜಾಮೀನು ರಹಿತ ದೂರು ದಾಖಲಿಸಿದ್ದರು. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ವರನ ಮನೆಗೆ ನಡೆಸಿದ ದಾಳಿಯ ಹಿಂದೆ ಹಿಂದೂ ಸಂಘಟನೆಯ ಕೈವಾಡವಿದೆಯೆಂದು ಶಂಕಿಸಲಾಗಿದ್ದು, ಕೋಮು ಸಂಘರ್ಷದ ಸಾಧ್ಯತೆಯತ್ತ ಘಟನೆ ಮುಂದುವರಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.