ನವದೆಹಲಿ: ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಪ್ರಕರಣದ ವಿಚಾರಣೆಯಿಂದ ದೂರವಿರುವಂತೆ ಬೆದರಿಕೆ ಬರುತ್ತಿದೆ ಎಂದು ಸುಪ್ರೀಂಕೋರ್ಟ್ ವಕೀಲರು ಸುಪ್ರೀಂ ಕೋರ್ಟ್ ಗೆ ಪತ್ರ ಬರೆದಿದ್ದಾರೆ.
"ತಮಗೆ ಬೆದರಿಕೆ ಕರೆ ಬರುತ್ತಿದ್ದು, ಇದರಲ್ಲಿ ನ್ಯಾಯಾಧೀಶರಿಗೆ ಬೆದರಿಕೆ ಹಾಕಲಾಗಿದೆ. ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಡ್ ಅಸೋಸಿಯೇಷನ್ (ಎಸ್ ಸಿಎಒಆರ್ ಎ) ಈ ಪತ್ರ ಬರೆದಿದ್ದು, ಖಲಿಸ್ಥಾನದ ಪರವಾಗಿರುವ ಸಂಘಟನೆ ಸಿಖ್ ಫಾರ್ ಜಸ್ಟಿಸ್ ನಿಂದ ಈ ಬೆದರಿಕೆ ಬಂದಿದೆ" ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ನ ಆನ್ ರೆಕಾರ್ಡ್ ಅಡ್ವೊಕೇಟ್ ಗಳಿಗೆ/ ಸದಸ್ಯರಿಗೆ ಜ.10 ರಂದು ಮಧ್ಯಾಹ್ನ 12.36 ರ ವೇಳೆಗೆ ರೆಕಾರ್ಡ್ ಮಾಡಲಾದ ಕರೆ ಬಂದಿದ್ದು, ಪ್ರಧಾನಿ ಮೋದಿ ಜ.05 ರಂದು ಪಂಜಾಬ್ ಗೆ ಭೇಟಿ ನೀಡಿದ್ದ ವೇಳೆ ಉಂಟಾದ ಭದ್ರತಾ ಲೋಪಕ್ಕೆ ಅಮೆರಿಕಾದಲ್ಲಿರುವ ಸಿಖ್ಸ್ ಫಾರ್ ಜಸ್ಟಿಸ್ ಎಂಬ ಸಂಘಟನೆ ಕಾರಣ ಎಂದು ಈ ಕರೆಯಲ್ಲಿ ಹೇಳಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಪಿಐಎಲ್ ಹಾಗೂ ಇನ್ನಿತರ ಅರ್ಜಿಗಳ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಿಂದೆಸರಿಯಬೇಕು ಎಂದು ಎಚ್ಚರಿಸಿದ್ದಾರೆ. 1984 ರಲ್ಲಿ ಸಿಖ್ ವಿರೋಧಿ ದಂಗೆಗಳ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸುಪ್ರೀಂ ಕೋರ್ಟ್ ಗೆ ಸಾಧ್ಯವಾಗಿಲ್ಲ ಎಂಬ ಆಧಾರದಲ್ಲಿ ಈಗಲೂ ನ್ಯಾಯಾಧೀಶರು ಹಿಂದೆ ಸರಿಯಬೇಕೆಂದು ಕರೆ ಮಾಡಿದವರು ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ ಪ್ರಧಾನ ಕಾರ್ಯದರ್ಶಿ ವಿರೇಂದ್ರ ಕುಮಾರ್ ಬನ್ಸಾಲ್ ಅವರಿಗೆ ಬರೆದಿರುವ ಪತ್ರದಲ್ಲಿ ವಕೀಲರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ಆನ್ ರೆಕಾರ್ಡ್ ನಲ್ಲಿರುವ ವಕೀಲರ ದೂರವಾಣಿ ನಂಬರ್ ಹಾಗೂ ಇನ್ನಿತರ ವಿವರಗಳು ಸೋರಿಕೆಯಾಗಿರುವುದು ಈ ಮೂಲಕ ಸ್ಪಷ್ಟವಾಗಿದ್ದು ಅಡ್ವೊಕೇಟ್ ಗಳ ಗೌಪ್ಯತೆಗೆ ಧಕ್ಕೆ ಉಂಟಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ನ ಹಲವು ಮಂದಿ ವಕೀಲರು ಪ್ರಧಾನಿ ಭದ್ರತಾ ಲೋಪದ ಕುರಿತು ತನಿಖೆಯಾಗಬೇಕೆಂದು ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.