ನವದೆಹಲಿ: ದೇಶದ ಕೆಲ ನಗರಗಳು ಅಥವಾ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಸ್ಥಿರತೆ ಕಂಡುಬರುತ್ತಿದೆ. ಆದರೂ, ಸೋಂಕು ಪ್ರಸರಣದ ಅಪಾಯ ಇದ್ದೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿ ಡಾ.ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ನವದೆಹಲಿ: ದೇಶದ ಕೆಲ ನಗರಗಳು ಅಥವಾ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಸ್ಥಿರತೆ ಕಂಡುಬರುತ್ತಿದೆ. ಆದರೂ, ಸೋಂಕು ಪ್ರಸರಣದ ಅಪಾಯ ಇದ್ದೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿ ಡಾ.ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
'ಸೋಂಕು ಪ್ರಸರಣಕ್ಕೆ ಕಡಿವಾಣ ಹಾಕುವುದು ಹಾಗೂ ಸ್ಥಳೀಯ ಸ್ಥಿತಿಗೆ ಅನುಗುಣವಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಗಮನ ನೀಡುವುದು ಮುಖ್ಯ' ಎಂದು ಅವರು ಹೇಳಿದ್ದಾರೆ.
ಡಾ.ಪೂನಮ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿಯಾಗಿದ್ದಾರೆ. ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕೋವಿಡ್ ಪಿಡುಗಿನ ಸ್ಥಿತಿಗತಿ ಕುರಿತು ಮಾತನಾಡಿದ್ದಾರೆ.
ದೇಶದ ಕೆಲ ಭಾಗಗಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಇಲ್ಲ. ಸ್ಥಿರತೆಯ ಮುನ್ಸೂಚನೆಗಳು ಕಂಡುಬರುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಹೇಳಿದೆ. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಕೋವಿಡ್-19ನ ಅಪಾಯ ಇನ್ನೂ ಅಧಿಕವಾಗಿಯೇ ಇದೆ. ಸೋಂಕು ಪ್ರಸರಣದ ವೇಗ ಯಾವ ಪ್ರಮಾಣದಲ್ಲಿಯೇ ಇದ್ದರೂ, ಯಾವ ದೇಶವೂ ಈ ವೈರಸ್‌ನ ಅಪಾಯದಿಂದ ಮುಕ್ತವಾಗಿಲ್ಲ' ಎಂದು ಹೇಳಿದರು.
'ಕೋವಿಡ್-19 ಪಿಡುಗು (ಪ್ಯಾಂಡೆಮಿಕ್) ಈಗ ದೇಶದಲ್ಲಿ ಸ್ಥಳೀಯವಾಗಿ ಪ್ರಸರಣವಾಗುವ ಕಾಯಿಲೆ ಹಂತ (ಎಂಡೆಮಿಕ್) ತಲುಪಿದೆಯೇ' ಎಂಬ ಪ್ರಶ್ನೆಗೆ, 'ಈಗಲೂ ಪಿಡುಗಿನ ಹಂತವೇ ಇದೆ. ಹೀಗಾಗಿ, ಸೋಂಕು ಪ್ರಸರಣ ತಡೆಯುವುದು ಹಾಗೂ ಜೀವಗಳನ್ನು ಉಳಿಸುವುದರತ್ತ ನಮ್ಮ ಗಮನ ಕೇಂದ್ರೀಕರಿಸಬೇಕಿದೆ' ಎಂದು ಉತ್ತರಿಸಿದರು.
'ಎಂಡೆಮಿಕ್ ಹಂತ ತಲುಪಿದೆ ಎಂದ ಮಾತ್ರಕ್ಕೆ ಕೊರೊನಾ ವೈರಸ್‌ನಿಂದ ಅಪಾಯ ಇಲ್ಲ ಎಂದು ಅರ್ಥವಲ್ಲ' ಎಂದೂ ಅವರು ಹೇಳಿದರು.
ಕೋವಿಡ್ ಲಸಿಕೆ ಓಮೈಕ್ರಾನ್ ತಳಿ ಸೋಂಕಿನ ವಿರುದ್ಧ ಪರಿಣಾಮಕಾರಿ ಎಂಬುದು ಸಿದ್ಧವಾಗಿದೆ. ಬೂಸ್ಟರ್ ಡೋಸ್ ಪಡೆಯುವುದರಿಂದ ಇನ್ನೂ ಹೆಚ್ಚಿನ ರಕ್ಷಣೆ ಸಿಗಲಿದೆ
- ಡಾ.ಪೂನಮ್ ಖೇತ್ರಪಾಲ್ ಸಿಂಗ್, ಡಬ್ಲ್ಯೂಎಚ್‌ಒದ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ