ನವದೆಹಲಿ: ಚೀನಾದ ಸೇನೆ ಪೀಪಲ್ ಲಿಬರೇಶನ್ ಆರ್ಮಿ ಭಾರತ ಮೂಲದ ಯುವಕನನ್ನು ಅಪಹರಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ಬಳಿ ಮಾಹಿತಿ ಇಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
ಭಾರತದ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ನಿವಾಸಿ 17 ವರ್ಷದ ಮಿರಮ್ ತರೊನ್ ಎಂಬಾತನನ್ನು ಚೀನಾ ಸೇನೆ ಅಪಹರಣ ಮಾಡಿರುವುದಾಗಿ ಅರುಣಾಚಲ ಪ್ರದೇಶ ಸಂಸದ ತಪಿರ್ ಗಾವೊ ಗಂಭೀರ ಆರೋಪ ಮಾಡಿದ್ದರು.
ಭಾರತದ ಗಡಿಯೊಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಮಿರಮ್ ಎಂಬಾತನನ್ನು ಚೀನಾದ ಸೇನೆ ಅಪಹರಣ ಮಾಡಿದೆ ಎನ್ನಲಾಗಿದೆ. ಆತ ಬೇಟೆ ಮತ್ತು ಗಿಡಮೂಲಿಕೆ ಸಂಗ್ರಹಿಸುವ ಕೆಲಸದಲ್ಲಿ ನಿರತನಾಗಿದ್ದ.
ಯುವಕ ನಾಪತ್ತೆಯಾಗಿರುವ ಸುದ್ದಿ ತಿಳಿದುಬಂದ ತಕ್ಷಣ ಭಾರತೀಯ ಸೇನೆ ಚೀನಾದ ಸೇನೆಯನ್ನು ಸಂಪರ್ಕಿಸಿ ತಮ್ಮ ದೇಶದ ಯುವಕ ದಾರಿ ತಪ್ಪಿದ್ದು, ಕಣ್ಮರೆಯಾಗಿದ್ದಾನೆ ಎಂದು ಸುದ್ದಿ ಮುಟ್ಟಿಸಿತ್ತು.