ಗುವಾಹಟಿ :ವಿವಾದಿತ ಗಿಟ್‌ಹಬ್ ನ 'ಬುಲ್ಲಿ ಬಾಯ್' ಮಾಸ್ಟರ್ ಮೈಂಡ್ ಮತ್ತು ಆ್ಯಪ್‌ನ ಪ್ರಧಾನ ಟ್ವಿಟರ್ ಖಾತೆದಾರ ನೀರಜ್ ಬಿಷ್ಣೋಯ್ ಅವರನ್ನು ದೆಹಲಿ ಪೊಲೀಸರ ತಂಡವು ಅಸ್ಸಾಂನ ಜೋರ್ಹತ್‌ನಿಂದ ಬಂಧಿಸಿದೆ.
ಅಸ್ಸಾಂನ ನಿವಾಸಿಯಾಗಿದ್ದ 21 ವರ್ಷದ ನೀರಜ್ ನನ್ನು ಬಂಧಿಸಿರುವ ದೆಹಲಿ ಪೊಲೀಸರು ವಿಮಾನದ ಮೂಲಕ ದೆಹಲಿಗೆ ಕರೆದೊಯ್ದಿದ್ದಾರೆ.
ಈ ಪ್ರಕರಣ ಸಂಬಂಧ ಇಲ್ಲಿಯವರೆಗೆ ನಡೆದ ನಾಲ್ಕನೇ ಬಂಧನವಾಗಿದೆ. ಈ ಹಿಂದೆ ಮುಂಬೈ ಪೊಲೀಸರು ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದರು. ಬುಲ್ಲಿ ಬಾಯ್ ಆ್ಯಪ್ ಮೂಲಕ ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಲು ಬಳಸಲಾಗುತ್ತಿತ್ತು ಎಂಬ ಆರೋಪವಿದೆ. ಮಹಿಳೆಯರ ದೂರಿನ ಮೇರೆಗೆ ದೆಹಲಿ ಮತ್ತು ಮುಂಬೈನಲ್ಲಿ ಎಫ್‌ಐಆರ್ ದಾಖಲಾಗಿದೆ.
ನೀರಜ್ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಕೊತ್ರಿ ಕಲಾನ್ ಗ್ರಾಮದಲ್ಲಿರುವ ಭೋಪಾಲ್ ವಿಶ್ವವಿದ್ಯಾಲಯದ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಯಲ್ಲಿ ಬಿ.ಟೆಕ್ ಎರಡನೇ ವರ್ಷದ ಕಂಪ್ಯೂಟರ್ ಸೈನ್ಸ್ (ಗೇಮಿಂಗ್) ವಿದ್ಯಾರ್ಥಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವುದು ಮಾಧ್ಯಮಗಳಲ್ಲಿ ವರದಿಯಾದ ನಂತರ ಸಂಸ್ಥೆ ಗುರುವಾರ ಆತನನ್ನು ಅಮಾನತುಗೊಳಿಸಿದೆ.