ನವದೆಹಲಿ : ಹರಿದ್ವಾರದಲ್ಲಿ ನಡೆದಿದ್ದ ಧರ್ಮ ಸಂಸದ್‌ನಲ್ಲಿ ನೀಡಿದ್ದ ಬಹಿರಂಗ ನರಮೇಧದ ಕರೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಹಿರಿಯ ವಕೀಲ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ವಿಚಾರವನ್ನು ನಾವು ಎತ್ತಿಕೊಳ್ಳಲಿದ್ದೇವೆ ಎಂದು ಹೇಳಿರುವುದಾಗಿ ndtv.com ವರದಿ ಮಾಡಿದೆ.
ಸಿಬಲ್ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ, ನಾವು ಈ ಕುರಿತು ಗಮನ ಹರಿಸುತ್ತೇವೆ. ಇದುವರೆಗೂ ವಿಚಾರಣೆ ಆರಂಭಿಸಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಕೇವಲ ಎಫ್‌ಐಆರ್ ಮಾತ್ರ ದಾಖಲಾಗಿದ್ದು, ಇದುವರೆಗೂ ಯಾವುದೇ ಬಂಧನವಾಗಿಲ್ಲ ಎಂದು ಸಿಬಲ್ ಕೋರ್ಟ್‌ಗೆ ತಿಳಿಸಿದ್ದಾರೆ.
ಕಳೆದ ತಿಂಗಳು ಹರಿದ್ವಾರದಲ್ಲಿ ನಡೆದ ಧರಮ್ ಸಂಸದ್ ಸಮಾವೇಶದಲ್ಲಿ ಮುಸ್ಲಿಮರ ಸಾಮೂಹಿಕ ನರಮೇಧಕ್ಕೆ ನೀಡಿದ ಬಹಿರಂಗ ಕರೆಯು ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಕಾರ್ಯಕ್ರಮ ಆಯೋಜಕರ ಹಾಗೂ ಭಾಷಣಕಾರರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ಕೂಡ ಚರ್ಚೆಗೆ ಗ್ರಾಸವಾಗಿತ್ತು.
ನರಮೇಧಕ್ಕೆ ನೀಡುವ ಕರೆಯನ್ನು ನರಮೇಧವೆಂದೇ ಪರಿಗಣಿಸಿ ಸುಪ್ರೀಂ ಕೋರ್ಟ್ ಈ ಕುರಿತು ಸುಮೋಟೋ ಪ್ರಕರಣ ಕೈಗೊಳ್ಳಬಹುದು. ಇದುವರೆಗೂ ಸುಪ್ರೀಂ ಕೋರ್ಟ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವುದು ಆಘಾತಕಾರಿ ಎಂದು ನ್ಯಾಯಮೂರ್ತಿ ಮದನ್ ಬಿ ಲೋಕೂರು ಅಭಿಪ್ರಾಯಪಟ್ಟಿದ್ದರು.