ಭೋಪಾಲ್: ರೈತರಿಂದ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಯ ಆಧಾರದಲ್ಲಿ ಖರೀದಿಸುವ ಕುರಿತಂತೆ ಕೇಂದ್ರದ ಇತ್ತೀಚಿಗಿನ ಪ್ರಸ್ತಾವನೆಯೊಂದು ರೈತರಲ್ಲಿ ಸಂಶಯಕ್ಕೆ ಕಾರಣವಾಗಿದೆಯಲ್ಲದೆ ವಿಪಕ್ಷಗಳಿಂದ ಟೀಕೆಗೂ ಗುರಿಯಾಗಿದೆ ಎಂದು ndtv.com ವರದಿ ಮಾಡಿದೆ.
ಭೋಪಾಲ್: ರೈತರಿಂದ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಯ ಆಧಾರದಲ್ಲಿ ಖರೀದಿಸುವ ಕುರಿತಂತೆ ಕೇಂದ್ರದ ಇತ್ತೀಚಿಗಿನ ಪ್ರಸ್ತಾವನೆಯೊಂದು ರೈತರಲ್ಲಿ ಸಂಶಯಕ್ಕೆ ಕಾರಣವಾಗಿದೆಯಲ್ಲದೆ ವಿಪಕ್ಷಗಳಿಂದ ಟೀಕೆಗೂ ಗುರಿಯಾಗಿದೆ ಎಂದು ndtv.com ವರದಿ ಮಾಡಿದೆ.
ಆಹಾರ ಧಾನ್ಯಗಳು ಜಾಗತಿಕ ಮಟ್ಟದಲ್ಲಿರುವಂತೆ ಮಾಡುವ ಹಾಗೂ ಜನರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳು ದೊರೆಯುವಂತೆ ಮಾಡುವ ಕ್ರಮ ಇದೆಂದು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಹೇಳಿದೆಯಾದರೂ ಕಠಿಣ ನಿಯಮಗಳ ಮೂಲಕ ರೈತರಿಗೆ ಎಂಎಸ್‌ಪಿ ಕೈಗೆಟುಕದಂತೆ ಮಾಡುವ ಉದ್ದೇಶ ಇದರ ಹಿಂದೆ ಇದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಎಂಎಸ್‌ಪಿ ನೀಡಿ ಆಹಾರ ಧಾನ್ಯಗಳನ್ನು ಖರೀದಿಸುವುದನ್ನು ತಪ್ಪಿಸಲು ಸರಕಾರ ಈ ರೀತಿ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಕೇಂದ್ರ ಖರೀದಿಸುವ ಆಹಾರ ಧಾನ್ಯಗಳ ಈಗಿನ ಗುಣಮಟ್ಟ ಮಾನದಂಡಗಳನ್ನು ಪರಿಶೀಲಿಸಿ ಅವುಗಳನ್ನು ಜಾಗತಿಕ ಮಟ್ಟಕ್ಕೇರಿಸುವ ಉದ್ದೇಶದಿಂದ ಡಿಸೆಂಬರ್ 31ರಂದು ಎಫ್‌ಸಿಐ ಅಧ್ಯಕ್ಷರು ಸಭೆಯ ನೋಟಿಸ್ ಒಂದನ್ನು ನೀಡಿದ್ದರು.
ಈ ಪ್ರಸ್ತಾವನೆಯಂತೆ ಗೋಧಿ ಕಾಳಿನಲ್ಲಿನ ತೇವಾಂಶ ಈಗಿನ ಶೇ. 14ಕ್ಕಿಂತ ಶೇ. 12ರಷ್ಟಿರಬೇಕೆಂದು ಪ್ರಸ್ತಾಪಿಸಲಾಗಿದೆ. ಅಂತೆಯೇ ಗೋಧಿ ಕಾಳಿನಲ್ಲಿರುವ ಅನ್ಯ ವಸ್ತುಗಳ ಪ್ರಮಾಣ ಈಗಿನ ಶೇ. 0.75ರಿಂದ ಶೇ. 0.50ಗೆ ಇಳಿಸಲು ಪ್ರಸ್ತಾಪಿಸಲಾಗಿದೆ. ಕೊಂಚ ಹಾನಿಗೊಳಗಾದ ಗೋಧಿ ಕಾಳಿನ ಅಂಶವನ್ನು ಶೇ. 4ರಿಂದ ಶೇ. 2ಕ್ಕೆ ಇಳಿಸಲು ಹಾಗೂ ಒಡೆದ ಕಾಳಿನ ಪ್ರಮಾಣ ಈಗಿನ ಶೇ. 6ರಿಂದ ಶೇ. 4ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.
ಭತ್ತಕ್ಕೆ ಸಂಬಂಧಿಸಿದಂತೆ ಅನುಮತಿಸಿದ ತೇವಾಂಶ ಮಟ್ಟವನ್ನು ಈಗಿನ ಶೇ. 17ರಿಂದ ಶೇ. 16ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ. ಅಂತೆಯೇ ಇತರ ವಿಚಾರಗಳಲ್ಲೂ ಗೋಧಿಯಂತೆಯೇ ಅಕ್ಕಿ ವಿಚಾರದಲ್ಲೂ ಕೆಲವೊಂದು ಮಾನದಂಡಗಳನ್ನು ಏರಿಸಲಾಗಿದೆ ಎಂದು ವರದಿಯಾಗಿದೆ.