ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಪೆಗಾಸಸ್ ಸ್ನೂಪಿಂಗ್ ವಿವಾದ ಕುರಿತ ಗೊಂದಲ ಪರಿಹರಿಸಲು ದೇಶವನ್ನು ಉದ್ದೇಶಿಸಿ ಮಾತನಾಡಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಭಾನುವಾರ ಒತ್ತಾಯಿಸಿದ್ದಾರೆ.
ನಿನ್ನೆ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮಾತನಾಡಿದ ಸಿಎಂ ಗೆಹ್ಲೋಟ್, ರಾಷ್ಟ್ರಪಿತನನ್ನು ಹತ್ಯೆ ಮಾಡಿದ ವ್ಯಕ್ತಿಯ ಸಿದ್ಧಾಂತವನ್ನು ಅನುಸರಿಸುವವರು ದೇಶವನ್ನು ಆಳುತ್ತಿದ್ದಾರೆ ಮತ್ತು ಸಂಸದರಾಗಿ ಸಂಸತ್ತಿಗೆ ಪ್ರವೇಶಿಸುತ್ತಿದ್ದಾರೆ ಎಂದರು.
2017 ರಲ್ಲಿ ರಕ್ಷಣಾ ಒಪ್ಪಂದದ ಭಾಗವಾಗಿ ಭಾರತವು ಇಸ್ರೇಲ್‌ನಿಂದ ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಿದೆ ಎಂಬ ಮಾಧ್ಯಮ ವರದಿ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, "ಕೇಂದ್ರ ಸರ್ಕಾರ ಸ್ಪಷ್ಟೀಕರಣವನ್ನು ನೀಡಬೇಕು. ಸರ್ಕಾರ ಸ್ವಚ್ಛವಾಗಿದ್ದರೆ ಪ್ರಧಾನಿ ಸ್ವತಃ ದೇಶ ಉದ್ದೇಶಿಸಿ ಮಾತನಾಡಬೇಕು" ಎಂದರು.
"ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಆದ್ಯತೆಯ ಮೇಲೆ ವಿಚಾರಣೆ ಮಾಡಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಯಾರನ್ನು ದೂಷಿಸಬೇಕು?" ಎಂದು ಅವರು ಪ್ರಶ್ನಿಸಿದರು.