ಕೊಟ್ಟಾಯಂ: ಕೊಟ್ಟಾಯಂ ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಮಗುವಿನ ಅಪಹರಣದ ಉದ್ದೇಶ ಬಹಿರಂಗಗೊಂಡಿದ್ದು ಆರೋಪಿ ಮಹಿಳೆ ತನ್ನ ಪ್ರೇಮಿಯೊಂದಿಗಿನ ಸಂಬಂಧ ಉಳಿಸಿಕೊಳ್ಳುವುದಕ್ಕೆ ಈ ಕೃತ್ಯ ಎಸಗಿದ್ದರು ಎಂದು ತಿಳಿದುಬಂದಿದೆ.
ನರ್ಸ್ ಸೋಗಿನಲ್ಲಿ ಆಸ್ಪತ್ರೆಯ ವಾರ್ಡ್ ಗೆ ಬಂದಿದ್ದ ನೀತು ಆರ್ (33) ಎಂಬ ಮಹಿಳೆ ಮಗುವನ್ನು ಪರೀಕ್ಷೆಗಾಗಿ ತಾಯಿ ಆಶ್ವತಿಯ ಬಳಿಯಿಂದ ಕರೆದುಕೊಂಡು ಹೋಗಿದ್ದರು. ಆದರೆ 30 ನಿಮಿಷಗಳಾದರೂ ಮಗು ವಾಪಸ್ ಬಾರದ ಕಾರಣ ತಾಯಿ ಆತಂಕಗೊಂಡು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಪೊಲೀಸರ ಸಮಯೋಚಿತ ಮಧ್ಯಪ್ರವೇಶದಿಂದ ಮಗು ಆರೋಪಿಯ ಸಹಿತ ದೊರೆತಿದ್ದು ಆರೋಪಿ ಮಹಿಳೆ ನೀತು ಎಂಬಾಕೆಯನ್ನು ಬಂಧಿಸಲಾಗಿದೆ.
ನೀತು ಎಂಬಾಕೆಯ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಆಕೆ 8 ವರ್ಷದ ತನ್ನ ಮಗನೊಂದಿಗೆ ಆಸ್ಪತ್ರೆಯ ಬಳಿಯೇ ಇದ್ದ ಹೊಟೇಲ್ ನಲ್ಲಿ ರೂಮ್ ಪಡೆದಿದ್ದರು. ಇದರ ಹಿಂದಿನ ಉದ್ದೇಶ ಆಸ್ಪತ್ರೆಯಿಂದ ಯಾವುದಾದರೂ ಮಗುವನ್ನು ಅಪಹರಿಸಿ ಅದು ತನ್ನದೇ ಮಗು ಎಂದು ಹೇಳುವ ಮೂಲಕ ತನ್ನ ಪ್ರೇಮಿಯೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳುವುದಾಗಿತ್ತು.
ಎರ್ನಾಕುಲo ನಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ನಡೆಸುತ್ತಿದ್ದ ನೀತು, ಇಬ್ರಾಹಿಂ ಬಾದುಷಾ ಎಂಬಾತನೊಂದಿಗೆ ಸಂಬಂಧ ಹೊಂದಿದ್ದರು. ಈ ವ್ಯಕ್ತಿ ಫೆಬ್ರವರಿಯಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾಗುತ್ತಿದ್ದಾರೆ ಎಂಬುದನ್ನು ಅರಿತ ನೀತು, ಆತನ ಬಳಿ ತಾನು ಗರ್ಭಿಣಿ ಎಂದು ಹೇಳಿದ್ದಾರೆ. ಇದಾದ ಬಳಿಕ ಆಕೆಗೆ ಅಚಾನಕ್ ಆಗಿ ಗರ್ಭಪಾತವಾಗಿತ್ತು. ಇದನ್ನು ಮರೆಮಾಚಿ ಬಾದುಷಾ ನನ್ನು ತಮ್ಮಿಬ್ಬರ ಮಗು ಎಂದು ನಂಬಿಸುವುದಕ್ಕಾಗಿ ಮಗುವನ್ನು ಅಪಹರಿಸಿದ್ದಾರೆ.
ಆಸ್ಪತ್ರೆಯಿಂದ ಮಗುವನ್ನು ಅಪಹರಿಸಿದ ಬೆನ್ನಲ್ಲೇ ನೀತು ಹೊಟೆಲ್ ಗೆ ಬಂದು ತನ್ನ ಪ್ರಿಯಕರ ಬಾದುಷಾಗೆ ಇದು ತಮ್ಮದೇ ಮಗು ಎಂದು ಮಗುವಿನ ಫೋಟೋ ಕಳಿಸಿದ್ದಾರೆ. ಬಾದುಷಾ ಅವರ ಸಂಬಂಧಿಕರೊಂದಿಗೆ ವಿಡಿಯೋ ಕಾಲ್ ಮೂಲಕವೂ ಮಾತನಾಡಿದ್ದು ತಾನು ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶಿಲ್ಪಾ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.