ನವದೆಹಲಿ: ಹೊಸ ವರ್ಷದ ಸಂದರ್ಭದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜ ಹಾರಾಟ ನಡೆಸಿದೆ ಎಂಬ ವಿಚಾರ ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಜಟಾಪಟಿಗೆ ಕಾರಣವಾಗಿತ್ತು. ಆದರೆ, ಭಾರತೀಯ ಸೇನೆ ಮೂಲಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಚೀನಾ ಧ್ವಜ ಹಾರಾಡಿದ್ದು, ಅವರ ಪ್ರದೇಶದಲ್ಲಿ ಎಂದು ತಿಳಿಸಿದೆ.
ಸೇನಾ ಮೂಲಗಳು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಚೀನಾದ ಧ್ವಜ ಹಾರಿಸಿದ ಪ್ರದೇಶದ ಬಗ್ಗೆ ಯಾವುದೇ ವಿವಾದವಿಲ್ಲ. ಮೊದಲಿನಿಂದಲೂ ಆ ಪ್ರದೇಶ ಚೀನಾದ ಹಿಡಿತದಲ್ಲಿದೆ. ಅಂದರೆ ಚೀನಾ ತನ್ನದೇ ಪ್ರದೇಶದಲ್ಲಿ ಧ್ವಜಾರೋಹಣ ಮಾಡಿದೆ. ಭಾರತ- ಚೀನಾ ಗಡಿ ವಿವಾದ ನಡೆಯುತ್ತಿರುವ ಗಾಲ್ವಾನ್ ನದಿ ಪ್ರದೇಶದಲ್ಲಿ ಅವರು ಧ್ವಜಾರೋಹಣ ಮಾಡಿಲ್ಲ ಎಂದು ಸ್ಪಷ್ಪಪಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಿ ಧ್ವಜ ಹಾರಾಡಿರುವ ಬಗ್ಗೆ ವಿಡಿಯೋ ಬಿಡುಗಡೆಯಾದ ಬಳಿಕ ವಿವಾದ ಪ್ರಾರಂಭವಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದರು. ನಮ್ಮ ತ್ರಿವರ್ಣ ಧ್ವಜ ಗಾಲ್ವಾನ್ ನಲ್ಲಿ ಚೆನ್ನಾಗಿ ಕಾಣುತ್ತದೆ. ಚೀನಾ ಉತ್ತರ ನೀಡಬೇಕಾಗಿದೆ. ಮೋದಿಜೀ ಮೌನ ಮುರಿಯಿರಿ ಎಂದು ಟ್ವೀಟ್ ಮಾಡಿ ಸಿಟ್ಟು ವ್ಯಕ್ತಪಡಿಸಿದ್ದರು.