ನವದೆಹಲಿ: ಪದ್ಮವಿಭೂಷಣ ಮತ್ತು ಸಿದ್ಧ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಅವರು ಭಾನುವಾರ ತಡರಾತ್ರಿ ವಿಧಿವಶರಾಗಿದ್ದಾರೆಂದು ತಿಳಿದುಬಂದಿದೆ.
ಲಘು ಹೃದಯಾಘಾತದಿಂದಾಗಿ 83 ವರ್ಷದ ಬಿರ್ಜು ಮಹಾರಾಜ್ ಅವರು ಭಾನುವಾರ ತಡರಾತ್ರಿ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ.
ಬಿರ್ಜು ಮಹಾರಾಜ್ ಅವರು ಕಥಕ್ ಪ್ರತಿಪಾದಕ ಜಗನ್ನಾಥ ಮಹಾರಾಜ್ ಅವರ ಮನೆಯಲ್ಲಿ ಜನಿಸಿದರು. ಜಗನ್ನಾಥ ಮಹಾರಾಜ್ ಉತ್ತರಪ್ರದೇಶದ ಲಖನೌ ಘರಾನಾದ ಅಚ್ಚನ್ ಮಹಾರಾಜ್ ಎಂದೇ ಜನಪ್ರಿಯರಾಗಿದ್ದರು. ಅವರು ರಾಯಗಢ ರಾಜಪ್ರಭುತ್ವದ ರಾಜ್ಯದಲ್ಲಿ ಆಸ್ಥಾನ ನೃತ್ಯಗಾರರಾಗಿ ಸೇವೆ ಸಲ್ಲಿಸಿದ್ದರು.
ಬಿರ್ಜು ಮಹಾರಾಜ್ ತಮ್ಮ 13ನೇ ವಯಸ್ಸಿನಲ್ಲಿ ನವದೆಹಲಿಯ ಸಂಗೀತ ಭಾರತಿಯಲ್ಲಿ ನೃತ್ಯ ಪ್ರಕಾರ ಕಲಿಸಲು ಪ್ರಾರಂಭಿಸಿದರು. ನಂತರ ಅವರು ದೆಹಲಿಯ ಭಾರತೀಯ ಕಲಾ ಕೇಂದ್ರದಲ್ಲಿ ಮತ್ತು ಕಥಕ್ ಕೇಂದ್ರದಲ್ಲಿ (ಸಂಗೀತ ನಾಟಕ ಅಕಾಡೆಮಿಯ ಘಟಕ) ಅಧ್ಯಾಪಕರ ಮುಖ್ಯಸ್ಥರಾಗಿದ್ದರು ಮತ್ತು ನಿರ್ದೇಶಕರಾಗಿದ್ದರು. ಬಳಿಕ1998 ರಲ್ಲಿ ಅವರು ನಿವೃತ್ತರಾಗಿದ್ದರು.
ನಿವೃತ್ತಿ ಬಳಿಕ ಅವರು ತಮ್ಮದೇ ನೃತ್ಯ ಶಾಲೆಯನ್ನು ತೆರೆದರು. ಅವರ ಕಲಾಶ್ರಮ ದೆಹಲಿಯಲ್ಲಿಯೂ ಇದೆ. ಅವರು ಸತ್ಯಜಿತ್ ರೇ ಅವರ ಶತ್ರಂಜ್ ಕೆ ಖಿಲಾರಿಯಲ್ಲಿ ಎರಡು ನೃತ್ಯದ ಸರಣಿಗಳಿಗೆ ಸಂಗೀತ ಸಂಯೋಜಿಸಿ ಹಾಡಿದ್ದರೂ ಕೂಡಾ. 2002 ರ ಕಾದಂಬರಿ ದೇವದಾಸ್‌ನ ಚಲನಚಿತ್ರ ಆವೃತ್ತಿಯಿಂದ ಕಾಹೆ ಛೇದ್ ಮೋಹೆ ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಗಮನ ಸೆಳೆದಿದ್ದರು.