ನವದೆಹಲಿ: ನೆರೆ ಹೊರೆಯ ರಾಷ್ಟ್ರಗಳನ್ನು ಬೆದರಿಸುವ ಚೀನಾ ನಡೆ ಪ್ರಾದೇಶಿಕವಾಗಿ ಅಸ್ಥಿರತೆಗೆ ಕಾರಣವಾಗಬಹುದು ಎಂದು ಅಮೆರಿಕ ಎಚ್ಚರಿಸಿದೆ. ಅಮೆರಿಕ ಆಡಳಿತದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಈ ಬಗ್ಗೆ ಮಾತನಾಡಿದ್ದು, "ಚೀನಾದ ನಡೆಯನ್ನು ಪ್ರಾದೇಶಿಕವಾಗಿ ಹಾಗೂ ಜಾಗತಿಕವಾಗಿ ನಾವು ಹೇಗೆ ನೋಡುತ್ತೇವೆ ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಇದೆ ಎಂದು ಹೇಳಿದ್ದಾರೆ.
ಚೀನಾದ ನಡೆ ಅಸ್ಥಿರತೆ ಉಂಟುಮಾಡುತ್ತದೆ ಎಂದು ನಾವು ನಂಬುತ್ತೇವೆ ಹಾಗೂ ನೆರೆಹೊರೆಯವರಿಗೆ ಬೆದರಿಕೆ ಹಾಕುವ ವರ್ತನೆಯ ಬಗ್ಗೆ ಕಳವಳಗೊಂಡಿದ್ದೇವೆ. ನಾವು ನಮ್ಮ ಪಾಲುದಾರ ರಾಷ್ಟ್ರಗಳೊಂದಿಗೆ ನಿಲ್ಲಲಿದ್ದೇವೆ ಎಂದು ಅಮೆರಿಕದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ.
ಚೀನಾದೊಂದಿಗಿನ ಮಾತುಕತೆ ವೇಳೆ ಭಾರತ-ಚೀನಾ ಗಡಿ ವಿಚಾರ ಪ್ರಸ್ತಾಪವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ನಮ್ಮ ಪಾಲುದಾರ ರಾಷ್ಟ್ರಗಳೊಂದಿಗೆ ನಾವು ನಿಲ್ಲಲಿದ್ದೇವೆ. ಬೆಂಬಲ ನೀಡಲಿದ್ದೇವೆ, ಅಮೆರಿಕ ಮಾತುಕತೆಯ ಮೂಲಕ ಶಾಂತಿಯುತವಾಗಿ ಗಡಿ ವಿವಾದಗಳನ್ನು ಬಗೆಹರಿಸಿಕೊಳ್ಳುವುದನ್ನು ಬೆಂಬಲಿಸಲಿದೆ" ಎಂದಷ್ಟೇ ಹೇಳಿದ್ದಾರೆ.