ಕೊಟ್ಟಾಯಂ: ಪದವಿ ಸರ್ಟಿಫಿಕೇಟ್ ಶೀಘ್ರ ವಿತರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯಿಂದ 15ಸಾವಿರ ರೂ. ಲಂಚ ಸ್ವೀಕರಿಸುವ ಸಂದರ್ಭ ಕೋಟ್ಟಾಯಂನ ಮಹಾತ್ಮಾಗಾಂಧಿ ವಿಶ್ವ ವಿದ್ಯಾಲಯದ ಪರೀಕ್ಷಾ ವಿಭಾಗ ಸಹಾಯಕಿ, ಆರ್ಪುಕರ ನಿವಾಸಿ ಸಿ.ಜೆ ಎಲ್ಸಿ ಎಂಬವರನ್ನು ಕೋಟ್ಟಾಯಂ ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಪತ್ತನಂತಿಟ್ಟದ ಎಂ.ಬಿ.ಎ ಪದವಿ ವಿದ್ಯಾರ್ಥಿನಿಯ ದೂರಿನ ಮೇರೆಗೆ ವಿಜಿಲೆನ್ಸ್ ಕಾರ್ಯಾಚರಣೆ ನಡೆಸಿದೆ. ಪದವಿ ಪ್ರೊವಿಶನಲ್ ಸರ್ಟಿಫಿಕೇಟ್‍ಗಾಗಿ ವಿದ್ಯಾರ್ಥಿನಿ ಅರ್ಜಿ ಸಲ್ಲಿಸಿದ್ದು, ಸರ್ಟಿಫಿಕೇಟ್ ತಕ್ಷಣ ಲಭಿಸಬೇಕಾದರೆ, ಒಂದುವರೆ ಲಕ್ಷ ರೂ. ನೀಡುವಂತೆ ಎಲ್ಸಿ ಬೇಡಿಕೆಯಿರಿಸಿದ್ದಳು. ಈ ಮೊತ್ತದಲ್ಲಿ 1.25ಲಕ್ಷ ರೂ. ಎಲ್ಸಿಯ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದ್ದು, ಸರ್ಟಿಫಿಕೇಟ್ ಲಭಿಸಬೇಕಾದರೆ ಮತ್ತೆ 15ಸಾವಿರ ರಊ. ನೀಡುವಂತೆ ಒತ್ತಾಯಿಸಿದ್ದಳು. ಈ ಬಗ್ಗೆ ವಿದ್ಯಾರ್ಥಿನಿ ವಿಜಿಲೆನ್ಸ್ ಎಸ್.ಪಿ ವಿ.ಜಿ ವಿನೋದ್ ಅವರಿಗೆ ದೂರು ನೀಡಿದ್ದರು. ವಿಜಿಲೆನ್ಸ್ ತಂಡ ಗುರುತುಮಾಡಿಕೊಟ್ಟ 15ಸಾವಿರ ರೂ. ನಗದನ್ನು ಸಿ.ಜೆ ಎಲ್ಸಿಗೆ ವಿದ್ಯಾರ್ಥಿನಿ ನೀಡುತ್ತಿದ್ದಂತೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.