ನವದೆಹಲಿ: ಇಂದಿನಿಂದ(ಸೋಮವಾರ) ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದ್ದು, ಪೆಗಾಸಸ್ ಸ್ನೂಪಿಂಗ್ ವಿವಾದ, ರೈತರ ಸಮಸ್ಯೆಗಳು ಸಂಕಷ್ಟ ಮತ್ತು ಪೂರ್ವ ಲಡಾಖ್‌ನಲ್ಲಿ ಚೀನಾದ ಆಕ್ರಮಣಗಳಂತಹ ವಿಷಯಗಳಲ್ಲಿ ಮೋದಿ ಸರ್ಕಾರವನ್ನು ಗುರಿಯಾಗಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಕೋವಿಡ್-19 ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸೆಂಟ್ರಲ್ ಹಾಲ್ ಹಾಗೂ ಉಭಯ ಸದನಗಳ ಚೇಂಬರ್‌ಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಆರ್ಥಿಕ ಸಮೀಕ್ಷೆ 2021-22 ಮತ್ತು ಮಂಗಳವಾರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ಲೋಕಸಭೆಯು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಬುಧವಾರದಿಂದ ಕೈಗೆತ್ತಿಕೊಳ್ಳಲಿದ್ದು, ಫೆಬ್ರವರಿ 7 ರಂದು ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಉತ್ತರಿಸುವ ನಿರೀಕ್ಷೆಯಿದೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಫೆಬ್ರವರಿ 2 ರಿಂದ ಪ್ರಾರಂಭವಾಗುವ ನಾಲ್ಕು ದಿನಗಳನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ ಎಂದು ಲೋಕಸಭೆಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯಲಿದ್ದು, ನಂತರ ವಿವಿಧ ಇಲಾಖೆಗಳಿಗೆ ಬಜೆಟ್ ಹಂಚಿಕೆಗಳನ್ನು ಪರಿಶೀಲಿಸಲು ಬಿಡುವು ನೀಡಲಾಗುತ್ತದೆ. ಮಾರ್ಚ್ 14 ರಂದು ಅಧಿವೇಶನ ಪುನರಾರಂಭವಾಗುತ್ತದೆ ಮತ್ತು ಏಪ್ರಿಲ್ 8 ರಂದು ಮುಕ್ತಾಯಗೊಳ್ಳುತ್ತದೆ.
ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ - ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ನಡುವೆ ಬಜೆಟ್ ಅಧಿವೇಶನ ನಡೆಯುತ್ತಿದೆ. ರೈತರ ಸಮಸ್ಯೆಗಳು, ಚೀನಾದ ಆಕ್ರಮಣ, ಕೋವಿಡ್-19 ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್, ಏರ್ ಇಂಡಿಯಾ ಮಾರಾಟ ಮತ್ತು ಪೆಗಾಸಸ್ ವಿವಾದದಂತಹ ಸಮಸ್ಯೆಗಳನ್ನು ಸಮಾನ ಮನಸ್ಕ ಪಕ್ಷಗಳೊಂದಿಗೆ ಪ್ರಸ್ತಾಪಿಸುವುದಾಗಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಘೋಷಿಸಿದೆ.