ಪೆರ್ಲ: ಗಡಿನಾಡಿನ ಪ್ರಸಿದ್ಧ ಸಾಹಿತಿ ಹರೀಶ್ ಪೆರ್ಲ ಅವರಿಗೆ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಗುರು ನಮನ ಗೌರವಾರ್ಪಣೆ ಜನವರಿ 7 ರಂದು ನಡೆಯಲಿದೆ.
ಹರೀಶರ ಪೆರ್ಲ ಸ್ವಗೃಹ ಗುಲಾಬಿಯಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಭವನ ಗ್ರಂಥಾಲಯದ ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು ತಿಳಿಸಿದ್ದಾರೆ.
ಕನ್ನಡ ಭವನ ಗ್ರಂಥಾಲಯದ ವಿಂಶತಿ ವರ್ಷಾಚರಣೆಯಂಗವಾಗಿ ಇಪ್ಪತ್ತು ಮಂದಿ ಹಿರಿಯರಿಗೆ ಗುರು ನಮನ ಸಲ್ಲಿಸಲು ನಿರ್ಧರಿಸಲಾಗಿದ್ದು, ಈಗಾಗಲೇ 16 ಮಂದಿಗೆ ಈ ಗೌರವ ಸಂದಿದೆ. ಕೇರಳ ಸರ್ಕಾರದ ನ್ಯಾಯಾಂಗ ಇಲಾಖೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ಸಾಗಿಸುತ್ತಿರುವ ಹರೀಶ್ ಪೆರ್ಲ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿ ಜನಪ್ರಿಯರಾಗಿದ್ದಾರೆ. ಕನ್ನಡ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಅವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಸಂವರ್ಧನೆಗೆ ಶ್ರಮಿಸುತ್ತಿರುವವರು. ಅವರ ಕವಿತೆ, ಹಾಸ್ಯ ಬರಹ, ಕತೆ, ಆತ್ಮ ಕಥನ ಕನ್ನಡಕ್ಕೆ ಗಡಿನಾಡು ಕಾಸರಗೋಡಿನಿಂದ ಸಂದ ಮಹತ್ವದ ಕೊಡುಗೆಗಳು.