ಬದಿಯಡ್ಕ: ಜಗತ್ತಿನ ಶಾಂತಿಗಾಗಿ ಬ್ರಹ್ಮಋಷಿಗಳು ವೇದ ಹಾಗೂ ವೇದೋಕ್ತವಾದ ಯಜ್ಞಕ್ರಿಯೆಯನ್ನೂ ಕಂಡುಹಿಡಿದರು. ವೇದಪಾಠಶಾಲೆಗಳು ನಿರಂತರವಾಗಿ ನಡೆಯುತ್ತಾ ಗುರು ಶಿಷ್ಯ ಕೊಂಡಿಯು ಬೆಳೆಯುತ್ತಿರಬೇಕು ಎಂದು ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರು ತಮ್ಮ ಶಿಷ್ಯವೃಂದಕ್ಕೆ ನೀಡಿದ ಆಶೀರ್ವಚನ ನುಡಿಗಳಲ್ಲಿ ಹೇಳಿದರು.
ಜ.6ರಿಂದ ನೀರ್ಚಾಲಿನಲ್ಲಿರುವ ಕಾಂಚಿ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ವೇದಪಾಠಶಾಲೆಯಲ್ಲಿ ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ 80ನೇ ವರ್ಷದ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಶಿಷ್ಯವೃಂದದವರ ನೇತೃತ್ವದಲ್ಲಿ ಪ್ರಾರಂಭವಾದ ಶ್ರೀಕೃಷ್ಣ ಯುಜುರ್ವೇದ ತೈತ್ತರೀಯ ಶಾಖಾಮಂತ್ರಸ್ವಾಹಾಕಾರ ಯಜ್ಞವು ಬುಧವಾರ ಬೆಳಗ್ಗೆ ಪೂರ್ಣಾಹುತಿಗೊಂಡಿತು. ಸೇರಿದ್ದ ವೈದಿಕ ವಿದ್ವಾಂಸರ ಮಂತ್ರಘೋಷದೊಂದಿಗೆ ವಸೋರ್ಧಾರಾಪೂರ್ವಕವಾಗಿ ಹೋಮಕ್ಕೆ ಆಹುತಿಯನ್ನು ನೀಡಲಾಯಿತು. ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿ ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ ದಂಪತಿಗಳನ್ನು ಆಶೀರ್ವದಿಸಿ, ಶಾಲು ಹೊದೆಸಿ ಗೌರವಿಸಿದರು. ದೇಶದ ವಿವಿಧೆಡೆಗಳಿಂದ ಆಗಮಿಸಿದ ಶಿಷ್ಯವೃಂದದವರು ತಮ್ಮ ಗುರುಕಾಣಿಕೆಯನ್ನು ಸಮರ್ಪಿಸಿ ಆಶೀರ್ವಾದವನ್ನು ಪಡೆದರು.