ಬದಿಯಡ್ಕ: ಬಡ ಕುಟುಂಬಗಳಿಗೆ ಮನೆ, ಸ್ವ ಉದ್ಯೋಗಕ್ಕೆ ಸಹಾಯ ನೀಡುತ್ತಿದ್ದ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ 265ರಷ್ಟು ಮನೆಗಳನ್ನು ನಿರ್ಮಿಸಿ ಕೊಡುಗೆ ನೀಡಿದ್ದ ಕಾಸರಗೋಡಿನ ಕೊಡುಗೈದಾನಿ, ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್ ರಿಗೆ ಸಂತಾಪ ಸೂಚಕ ಸಭೆಯು ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಅಗಲಿದ ಮಹಾಚೇತನದ ಆದರ್ಶ ನಮಗೆಲ್ಲಾ ದಾರಿದೀಪ. ಸನ್ಮಾರ್ಗಕ್ಕೆ ಪರಮಾತ್ಮನೇ ಸಹಾಯ ನೀಡುತ್ತಾನೆ ಎಂಬುದಕ್ಕೆ ಸಾಯಿರಾಂ ಭಟ್ಟರೇ ನಿದರ್ಶನ ಎಂದು ಕಿಳಿಂಗಾರು ಎಜ್ಯುಕೇಶನ್ ಕಮಿಟಿಯ ಪದಾಧಿಕಾರಿಗಳು ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆದ ಸುಬ್ರಾಯ ಭಟ್, ನಿವೃತ್ತ ಅಧ್ಯಾಪಕ ಉದನೇಶವೀರ ಕಿಳಿಂಗಾರು, ಸತ್ಯನಾರಾಯಣ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಕರನಾರಾಯಣ ಶರ್ಮ, ಸುಬ್ರಾಯ ಶರ್ಮ ಕೊಳಂಜಿತ್ತೋಡಿ, ನಡುಮನೆ ಗೋಪಾಲಕೃಷ್ಣ ಭಟ್, ಶಿವರಾಮ ಮೆಣಸಿನಪಾರೆ ಮೊದಲಾದವರು ಕಂಬನಿಯ ನುಡಿನಮನಗಳೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪಿಟಿಎ ಅಧ್ಯಕ್ಷ ಪದ್ಮನಾಭ ರೈ, ಉಪಾಧ್ಯಕ್ಷ ಭಾಸ್ಕರ ಕೆ, ಯಂಪಿಟಿಎ ಉಪಾಧ್ಯಕ್ಷೆ ಭಾರತಿ, ಅಂಗನವಾಡಿ ಅಧ್ಯಾಪಿಕೆ ಉಷಾ, ಸಹಾಯಕಿ ಶಾಲಿನಿ, ಅಧ್ಯಾಪಿಕೆ ಸಹನಾ ಯಂ,ವೆಂಕಟ ಸುರೇಶ್ ಅಜ್ಜರಕೋಡಿ, ಪ್ರಕಾಶ್ ಭಟ್ ಕಿಳಿಂಗಾರು, ಶಾಲಾ ಮಕ್ಕಳ ಹೆತ್ತವರು,ಊರವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಎ ಸ್ವಾಗತಿಸಿ, ಅಧ್ಯಾಪಿಕೆ ಮಧುಮತಿ ಕಂಬಾರು ವಂದಿಸಿದರು. ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.