ಕಾಸರಗೋಡು: ವಿದ್ಯಾನಗರದ ಚಿನ್ಮಯ ಕಲಾ ಮಂದಿರ ಸ್ಕೂಲ್ ಆಫ್ ಫೈನ್ ಆಟ್ರ್ಸ್ ನ ಆಶ್ರಯದಲ್ಲಿ ನಾಲ್ಕು ದಿವಸಗಳ ಕಾಲ ನಡೆಯಲಿರುವ ನಾಟ್ಯ ತರಬೇತಿ ಶಿಬಿರವನ್ನು ಕೇರಳ ರಾಜ್ಯದ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಪೂಜ್ಯ ಸ್ವಾಮಿ ವಿವಿಕ್ತಾನಂದ ಸರಸ್ವತಿ ಉದ್ಘಾಟಿಸಿದರು. ಈ ಸಂದರ್ಭ ಆಶೀರ್ವಚನ ನೀಡಿದ ಅವರು, ಭರತಮುನಿ ವಿರಚಿತ ನಾಟ್ಯಶಾಸ್ತ್ರ ಅತ್ಯಂತ ಶ್ರೇಷ್ಠವಾದುದು. ಅದನ್ನೇ ಮೂಲ ಗ್ರಂಥವನ್ನಾಗಿಟ್ಟುಕೊಂಡು ಸೃಷ್ಟಿಯಾದ ಈ ನಾಟ್ಯ ಕಲೆ ಜನ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ವಿವರಾಣಾತ್ಮಕ ನೃತ್ಯತರಬೇತಿ, ಶಾರೀರಿಕ ದೃಢತೆ ಹಾಗೂ ಬಳುಕು, ಮನಸ್ಸಿನ ಶಾಂತತೆಗಾಗಿರುವ ವ್ಯಾಯಾಮ ಇತ್ಯಾದಿ ನೃತ್ಯ ತರಬೇತಿ ಶಿಬಿರದ ವಿಶೇಷತೆಗಳಾಗಿವೆ ಎಂದು ತಿಳಿಸಿದರು.
ದೂರದರ್ಶನದ ಗ್ರೇಡೆಡ್ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ ನಿರ್ದೇಶನದಲ್ಲಿ ಕಾರ್ಯಾಗಾರ ನಡೆಯುತ್ತಿದೆ. ಸಮಾರಂಭದಲ್ಲಿ ಚಿನ್ಮಯ ವಿದ್ಯಾಲಯದ ನಿರ್ದೇಶಕ ಬಿ ಪುಷ್ಪರಾಜ್, ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮ, ಸಿಂಧು ಶಶೀಂದ್ರನ್, ಕಾರ್ಯಕ್ರಮದ ಆಯೋಜಕಿ ನೃತ್ಯಗುರು ಸೌಮ್ಯ ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು. ಜ.13ರ ವರೆಗೆ ನೃತ್ಯ ತರಬೇತಿ ಶಿಬಿರ ಜರುಗಲಿದೆ.