ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಣ ದ್ವಿಪಕ್ಷೀಯ ಒಪ್ಪಂದವೊಂದರಂತೆ ಉಭಯ ರಾಷ್ಟ್ರಗಳು ಹೊಂದಿರುವ ಪರಮಾಣು ಸ್ಥಾವರಗಳ ಪಟ್ಟಿಯನ್ನು ಶನಿವಾರ ವಿನಿಮಯ ಮಾಡಿಕೊಂಡವು.
ಎರಡು ರಾಷ್ಟ್ರಗಳ ನಡುವಿನ ದಾಳಿಯಲ್ಲಿ ಪರಮಾಣು ಬಳಕೆಯನ್ನು ಈ ಒಪ್ಪಂದವು ನಿರ್ಬಂಧಿಸುತ್ತದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ದಾಳಿಯನ್ನು ನಿಷೇಧಿಸುವ ಒಪ್ಪಂದದ ಅಡಿಯಲ್ಲಿ ಉಭಯ ರಾಷ್ಟ್ರಗಳು ತಮ್ಮಲ್ಲಿನ ಪರಮಾಣು ಸ್ಥಾವರ ಸಂಖ್ಯೆಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಹೇಳಿದೆ.
ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿನ ರಾಜತಾಂತ್ರಿಕ ಅಧಿಕಾರಿಗಳ ಮೂಲಕ ಅಧಿಕಾರಿಗಳು ಏಕಕಾಲದಲ್ಲಿ ಈ ವಿನಿಮಯ ಮಾಡಿಕೊಂಡರು.
ಎರಡು ರಾಷ್ಟ್ರಗಳ ನಡುವೆ 1991ರಲ್ಲಿ ಈ ಒಪ್ಪಂದ ಏರ್ಪಟ್ಟಿದೆ. ಇದರಂತೆ ಎರಡು ರಾಷ್ಟ್ರಗಳು ಪ್ರತಿ ವರ್ಷ ಜನವರಿ 1 ರಂದು ತಮ್ಮಲ್ಲಿನ ಪರಮಾಣು ಸ್ಥಾವರಗಳ ಸಂಖ್ಯೆ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಬೇಕು.
'ದ್ವಿಪಕ್ಷೀಯ ಒಪ್ಪಂದದಂತೆ ಭಾರತ ಮತ್ತು ಪಾಕಿಸ್ತಾನ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿನ ರಾಜತಾಂತ್ರಿಕ ವಾಹಿನಿಗಳ ಮೂಲಕ ಏಕಕಾಲದಲ್ಲಿ ತಮ್ಮಲ್ಲಿನ ಪರಮಾಣು ಸ್ಥಾವರಗಳ ಸಂಖ್ಯೆಯ ಪಟ್ಟಿಯನ್ನು ಇಂದು ಹಂಚಿಕೊಂಡವು' ಎಂದು ಎಂಇಎ ಹೇಳಿಕೆಯೊಂದರಲ್ಲಿ ತಿಳಿಸಿದೆ.
'1992ರ ಜನವರಿ 1 ರಂದು ಮೊದಲ ಬಾರಿಗೆ ಇಂತಹ ಪಟ್ಟಿಯನ್ನು ಎರಡು ರಾಷ್ಟ್ರಗಳು ಹಂಚಿಕೊಂಡಿದ್ದವು. ಈಗ ನಡೆದಿರುವುದು 31ನೇ ವಿನಿಮಯವಾಗಿದೆ' ಎಂದೂ ಅದು ಹೇಳಿದೆ.