ಪುದುಚೆರಿ: ದೇಶದ ಯುವಕರು 'ಸ್ಪರ್ಧಿಸಿ ಮತ್ತು ಗೆಲುವು ಸಾಧಿಸಿ' ನವ ಭಾರತದ ಮಂತ್ರ ಅಳವಡಿಸಿಕೊಳ್ಳಬೇಕು ಮತ್ತು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುವ ಯುದ್ಧಗಳಲ್ಲಿ ಜಯಗಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಯುವ ಜನತೆಗೆ ಕರೆ ನೀಡಿದ್ದಾರೆ.
ಇಂದು ಸ್ವಾಮಿ ವಿವೇಕಾನಂದರ ಅವರ ಜಯಂತಿ ಪ್ರಯುಕ್ತ ಪುದುಚೇರಿಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ 25ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ತ್ಯಾಗ ಬಲಿದಾನಗಳ ಹೊರತಾಗಿಯೂ ಸೂಕ್ತ ಮನ್ನಣೆ ಸಿಗದ ಸ್ವಾತಂತ್ರ್ಯ ಚಳವಳಿಯ ಅಸಾಧಾರಣ ವೀರರ ಬಗ್ಗೆ ಸಂಶೋಧನೆ ಮಾಡಿ ಬರೆಯುವಂತೆ ಸಲಹೆ ನೀಡಿದರು.
ಯುವಕರು ಒಂದಾಗಬೇಕು ಮತ್ತು ಯುದ್ಧಗಳನ್ನು ಗೆಲ್ಲಬೇಕು ಎಂದು ಉತ್ತೇಜಿಸಿದರು. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿನ ಪ್ರದರ್ಶನವನ್ನು ಪ್ರಧಾನಿ ಉಲ್ಲೇಖಿಸಿದರು, ಅಲ್ಲಿ ಭಾಗವಹಿಸುವವರು ತಮ್ಮ ಆತ್ಮವಿಶ್ವಾಸದಿಂದ "ಹಿಂದೆಂದೂ ಕಾಣದ" ಪದಕಗಳನ್ನು ಗೆದ್ದಿದ್ದಾರೆ. ಲಸಿಕಾ ಅಭಿಯಾನದಲ್ಲಿ ಯುವಕರು ಅಗಾಧವಾಗಿ ಭಾಗವಹಿಸುತ್ತಿರುವುದು ಅವರ ಗೆಲುವಿನ ಇಚ್ಛೆ ಮತ್ತು ಅವರಲ್ಲಿನ ಜವಾಬ್ದಾರಿಯ ಪ್ರಜ್ಞೆಗೆ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು.
ಪುದುಚೇರಿಯು 'ಶ್ರೇಷ್ಠ ಭಾರತ್ ಏಕ್ ಭಾರತ್'ಗೆ ಒಂದು ಸುಂದರ ಉದಾಹರಣೆಯಾಗಿದೆ ಮತ್ತು ಯುವಕರು ಇಲ್ಲಿಂದ ಕಲಿಯಲು ಬಹಳಷ್ಟು ಇದೆ ಎಂದು ಮೋದಿ ಹೇಳಿದರು.
ಭಾರತವೊಂದು ಭರವಸೆ, ನಂಬಿಕೆ ಎಂಬಂತೆ ಇಡೀ ಜಗತ್ತು ನಮ್ಮ ರಾಷ್ಟ್ರದ ಕಡೆಗೆ ನೋಡುತ್ತಿದೆ. ಯಾಕೆಂದರೆ ಇಲ್ಲಿನ ಜನರ ಯುವ ಮನಸ್ಥಿತಿ ಹೊಂದಿದ್ದಾರೆ. ಭಾರತದ ಸಾಮರ್ಥ್ಯ, ಕನಸು, ಆಲೋಚನೆ, ಪ್ರಜ್ಞೆಗಳೆಲ್ಲ ಯೌವ್ವನದಲ್ಲೇ ಇವೆ. ಹೀಗಾಗಿ ಸದಾ ಮುನ್ನೆಡೆಯುತ್ತಲೇ ಇರುತ್ತದೆ ಎಂದು ಪ್ರಧಾನಿ ಮೋದಿ ವ್ಯಾಖ್ಯಾನಿಸಿದರು.